ಮಂಗಳೂರು: ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್ಗಳಿಗೆ ಮಹಿಳಾ ಪ್ರಯಾಣಿಕರ ಕೊರತೆಯನ್ನು ಸೃಷ್ಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಗರ ಮತ್ತು ಜಿಲ್ಲೆಯಾದ್ಯಂತ ಸಂಚಾರಕ್ಕೆ ಹೆಚ್ಚಿನ ಜನರು ಖಾಸಗಿ ಬಸ್ಗಳನ್ನು ಅವಲಂಬಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಗಳ ಪ್ರಭಾವವೇ ಅಧಿಕ. ಇಲ್ಲಿನ ಜನರು ನಗರದಲ್ಲಿ ಪ್ರಯಾಣಿಸಲು, ಜಿಲ್ಲೆಯಾದ್ಯಂತ ಪ್ರಯಾಣಿಸಲು ಮತ್ತು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಪ್ರಯಾಣಿಸಲು ಖಾಸಗಿ ಬಸ್ಗಳ ಮೊರೆ ಹೋಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ಗಳ ಓಡಾಟ ತೀರಾ ಕಡಿಮೆ. ಕೆಲವೊಂದು ಮಾರ್ಗದಲ್ಲಿ ಒಂದೆರಡು ನರ್ಮ್ ಬಸ್ಗಳು ಮಾತ್ರ ಓಡಾಡುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಪುತ್ತೂರು, ಸುಳ್ಯ, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ರಸ್ತೆಗಳಲ್ಲಿ ಸರ್ಕಾರಿ ಬಸ್ ಓಡಾಟವಿದೆ. ಆದರೆ ಈ ಮಾರ್ಗಗಳಲ್ಲಿ ಮಂಗಳೂರು -ಪುತ್ತೂರು, ಮಂಗಳೂರು - ಉಪ್ಪಿನಂಗಡಿ, ಮಂಗಳೂರು- ವಿಟ್ಲ ಮಾರ್ಗದಲ್ಲಿ ಕಾಂಟ್ರ್ಯಾಕ್ಟ್ ಕ್ಯಾರೇಜ್ ಸೇವೆಯಡಿ ಖಾಸಗಿ ಬಸ್ಗಳು ಸಂಚಾರ ನಡೆಸುತ್ತಿವೆ.
ರಾಜ್ಯ ಸರ್ಕಾರವು ಭಾನುವಾರದಿಂದ ಆರಂಭಿಸಿರುವ ಮಹಿಳಾ ಬಸ್ ಪ್ರಯಾಣಿಕರಿಗೆ ಆರಂಭಿಸಿದ ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಇದೀಗ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ನಿತ್ಯ ಸಂಚರಿಸುವ ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ ನೆಚ್ಚಿಕೊಂಡಿದ್ದಾರೆ.