ಮಂಗಳೂರು:ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 2010ರಲ್ಲಿ ಗೋರಕ್ಷಣಾ ತಿದ್ದುಪಡಿಯನ್ನು ಅನುಷ್ಠಾನಗೊಳಿಸಿ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ತಂದ ಗೋರಕ್ಷಣಾ ಮಸೂದೆಯ ತಿದ್ದುಪಡಿಯನ್ನು ರಾಷ್ಟ್ರಪತಿಯವರಿಂದ ವಾಪಸ್ ತಂದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಸಚಿವ ಯು.ಟಿ.ಖಾದರ್ ಅವರು ಕೇಂದ್ರ ಸರ್ಕಾರ ದೇಶದ ಗೋವುಗಳ ರಕ್ಷಣೆಗಾಗಿ ಕಾಯ್ದೆಯನ್ನು ಅನುಷ್ಠಾನ ಮಾಡಲಿ ಎಂಬ ಹೇಳಿಕೆಗೆ ಪ್ರತಿಕ್ರಿಎಯೆ ನೀಡಿದ ಶ್ರೀನಿವಾಸ ಪೂಜಾರಿ, ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಗೋರಕ್ಷಣಾ ಕಾಯ್ದೆಯನ್ನು ತಂದಿತ್ತು. ನೀವೇ ಅಸೆಂಬ್ಲಿಯಲ್ಲಿ ಶಾಸಕರಾಗಿದ್ದೀರಿ. ಆದರೆ ನಿಮ್ಮ ಸರ್ಕಾರ ಬಂದ ತಕ್ಷಣ ಅದನ್ನು ರಾಷ್ಟ್ರಪತಿಯವರಿಂದ ಪುನರಪಿ ನಿಮ್ಮ ಪಕ್ಷದವರೇ ವಾಪಸ್ ತಂದಿರುವುದು. ಯಾಕೆ ಇಷ್ಟು ಬೇಗ ಮರೆತಿರಿ. ನಿಮಗೇನಾದರು ಗೋರಕ್ಷಣೆ ಮಾಡಬೇಕೆಂದಿದ್ದರೆ, ಗೋಗಳ್ಳರನ್ನು ವಿರೋಧಿಸಬೇಕೆಂದಿದ್ದರೆ ಬಿಜೆಪಿ ತಂದಿರುವ ಯೋಜನೆಯನ್ನು ಪುನರ್ ಅನುಷ್ಠಾನ ಮಾಡಲು ಯೋಚನೆ ಮಾಡಿ ಎಂದು ತಿರುಗೇಟು ನೀಡಿದರು.
ಐಎಂಎ ಪ್ರಕರಣ ಪಾರದರ್ಶಕವಾಗಿ ತನಿಖೆಯಾಗಲು ಸಿಬಿಐ ಸೂಕ್ತ:
ಐಎಂಎ ಹಗರಣದಲ್ಲಿ 40 ಸಾವಿರ ಜನರಿಗೆ ಅನ್ಯಾಯವಾಗಿದೆ. ಅದರಲ್ಲಿ ಶೇ. 95ಕ್ಕಿಂತಲೂ ಅಧಿಕ ಮಂದಿ ಮುಸ್ಲಿಂ ಜನಾಂಗದವರು. ಮನ್ಸೂರ್ ಖಾನ್ 10 ಸಾವಿರ ಕೋಟಿ ರೂ.ಗಳಿಗಿಂತಲೂ ಅಧಿಕ ಹಣ ದೋಚಿ ವಿದೇಶಕ್ಕೆ ಹೋಗಿದ್ದಾನೆ. ಅಲ್ಲಿಂದ ರಾಜ್ಯ ಸರ್ಕಾರದ ಅಧಿಕಾರ ಹಿಡಿದವರ ಬಗ್ಗೆ ಆಪಾದನೆ ಮಾಡುತ್ತಿದ್ದಾನೆ ಎಂದು ಹೇಳಿದರು.
ಮನ್ಸೂರ್ ಖಾನ್ನ ಎಡಬಲದಲ್ಲಿದ್ದವರು ಜಮೀರ್ ಅಹ್ಮದ್, ಸಿದ್ದರಾಮಯ್ಯ, ಕುಮಾರಸ್ವಾಮಿ, ರೋಷನ್ ಬೇಗ್. ನೀವು ಈ ಪ್ರಕರಣವನ್ನು ಎಸ್ಐಟಿಗೆ ಕೊಡುವ ಬಗ್ಗೆ ಹೇಳುತ್ತಿದ್ದೀರಿ. ಅವನು ನೇರವಾಗಿ ಕರ್ನಾಟಕ ರಾಜ್ಯದ ಮಂತ್ರಿಗಳ ಮೇಲೆ ಆಪಾದನೆ ಮಾಡುತ್ತಿದ್ದಾನೆ. ಈ ರಾಜ್ಯದ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು, ಪ್ರಭಾವಿ ರಾಜಕಾರಣಿಗಳು ಆ ಅಲ್ಪಸಂಖ್ಯಾತರ ಹಣವನ್ನು ಸೂರೆ ಮಾಡಿ, ಈಗ ಪ್ರಕರಣದಿಂದ ಹೊರಬರಲು ಯತ್ನಿಸುತ್ತಿದ್ದಾರೆ.
ಈಗ ರಾಜ್ಯ ಸರ್ಕಾರದ ಒಂದು ಭಾಗವಾದ ಎಸ್ಐಟಿಗೆ ಈ ಪ್ರಕರಣವನ್ನು ನೀಡಿದರೆ ಪಾರದರ್ಶಕವಾದ ತನಿಖೆಯಾಗುತ್ತದೆ ಎಂಬ ಯಾವ ಆಧಾರದ ಮೇಲೆ ನಂಬುತ್ತೀರಿ. ಆ ಕಾರಣಕ್ಕಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯ ಆಗಿದೆ. ಈ ಬಗ್ಗೆ ತನಿಖೆಯಾಗಬೇಕು, ನ್ಯಾಯ ದೊರಕಿಸಬೇಕು ಎಂಬ ಇಚ್ಛೆ ಇದ್ದರೆ ನಿಶ್ಚಯವಾಗಿ ಈ ತನಿಖೆಯನ್ನು ಸಿಬಿಐಗೆ ನೀಡಿ ಎಂದು ಆಗ್ರಹಿಸಿದರು.