ಸುಳ್ಯ(ದಕ್ಷಿಣ ಕನ್ನಡ): ಅಚ್ಚರಿಯಾದರೂ ಸತ್ಯ ಎಂಬಂತಿದೆ ಈ ಘಟನೆ. ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ದಕ್ಷಿಣ ಕನ್ನಡ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗ್ತಿದೆ.
ಪೂಜೆಗೆ ಬಳಸುವ ಕಾಲುದೀಪ, ಆರತಿ, ಗಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಬಿಸಾಡಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಗ್ರಿ ಇದ್ದ ಜಾಗದ ಸಮೀಪದಲ್ಲೇ ನದಿ ದಡದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನೂ ಅವರು ಗಮನಿಸಿದ್ದಾರೆ.
ಕೂಡಲೇ ಅವರು ಇತರರಿಗೆ ಮಾಹಿತಿ ನೀಡಿದ್ದು, ಇದನ್ನು ವೀಕ್ಷಿಸಲು ಸ್ಥಳಕ್ಕೆ ಹಲವಾರು ಜನರು ಆಗಮಿಸಿದ್ದಾರೆ. ಆದರೆ ಈ ಪೂಜಾ ಸಾಮಗ್ರಿಗಳನ್ನು ಯಾರು ಬಿಸಾಡಿರುವುದು ಎಂಬುದು ತಿಳಿದು ಬಂದಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ಇರುವ ಚಾರ್ಮತ ನಾಗನ ಸನ್ನಿಧಿಯಲ್ಲಿ ಸ್ಥಳೀಯರೆಲ್ಲ ಸೇರಿ ಪ್ರಾರ್ಥನೆ ನೆರವೇರಿಸಿ ಪೂಜಾ ಸಾಮಗ್ರಿಗಳನ್ನು ಬಿಸಾಡಿರುವ ಕುರಿತು ಗೊತ್ತಾಗಬೇಕು ಎಂದು ದೇವರ ಮುಂದೆ ಹೇಳಿಕೊಂಡು ಪೂಜಾ ಸಾಮಗ್ರಿಗಳನ್ನು ನದಿಯಿಂದ ಮೇಲಕ್ಕೆತ್ತಿದರು ಎನ್ನಲಾಗ್ತಿದೆ.