ಮಂಗಳೂರು :ಜಿಲ್ಲೆಯಲ್ಲಿ ಅವ್ಯಾಹತವಾಗಿ ಡ್ರಜ್ಜಿಂಗ್ ಮೂಲಕ ಮರಳುಗಾರಿಕೆ ನಡೆಯುತ್ತಿದೆ. ಇದಕ್ಕೆ ಬಿಜೆಪಿ ಶಾಸಕ, ಸಂಸದರ ಕುಮ್ಮಕ್ಕು ಇದೆ ಎಂದು ದ.ಕ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್‌ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯ ಇತಿಹಾಸದಲ್ಲಿ ಇಂತಹ ಅಕ್ರಮ ಮರಳುಗಾರಿಕೆ ಈ ಹಿಂದೆ ಕಂಡಿಲ್ಲ. ದೊಡ್ಡ ದೊಡ್ಡ ಡ್ರಜ್ಜಿಂಗ್ ಮೂಲಕ ಮರಳು ತೆಗೆಯಲಾಗುತ್ತಿದೆ. ಅಕ್ರಮ ಮರಳುಗಾರಿಕೆಯಿಂದ ಡ್ಯಾಂಗಳು, ಸೇತುವೆಗಳು ಅಪಾಯದ ಸ್ಥಿತಿಗೆ ತಲುಪಿವೆ. ಬಿಜೆಪಿ ಶಾಸಕ, ಸಂಸದರ ಕುಮ್ಮಕ್ಕಿನಿಂದ ಈ ಅಕ್ರಮ ಮರಳುಗಾರಿಕೆಯ ವಿರುದ್ಧ ಕ್ರಮಕೈಗೊಳ್ಳದೆ ಜಿಲ್ಲಾಡಳಿತ ಮೌನವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಮಾಜಿ ಸಚಿವ ಯು ಟಿ ಖಾದರ್ ಮಾತನಾಡಿ, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಮರಳು ಮಾಫಿಯಾಗೆ ಕಡಿವಾಣ ಹಾಕಲು ಸ್ಯಾಂಡ್ ಬಜಾರ್ ಆ್ಯಪ್ ಮಾಡಲಾಗಿತ್ತು. ಇದರಿಂದ ಎಲ್ಲರಿಗೂ ಸರ್ಕಾರ ನಿಗದಿಪಡಿಸಿದ ಕಡಿಮೆ ದರದಲ್ಲಿ ಮರಳು ಸಿಗುತ್ತಿತ್ತು. ಸರ್ಕಾರ ಬದಲಾದ ಕೂಡಲೇ ಇದನ್ನು ಸ್ಥಗಿತ ಮಾಡಲಾಗಿದೆ. ಇದೀಗ ಒಂದು ಲೋಡ್ ಮರಳಿನ ದರ ₹20 ಸಾವಿರಕ್ಕೆ ಏರಿಕೆಯಾಗಿದೆ ಎಂದರು.
ಈಗ ಬಿಜೆಪಿ ಪಾಸ್ ಇದ್ದರೆ, ಬಿಜೆಪಿ ಶಾಸಕರು ಲೆಟರ್ ಕೊಟ್ಟರೆ ಮರಳು ಸಾಗಾಟಕ್ಕೆ ಅನುಮತಿ ಸಿಗುತ್ತದೆ ಎಂದು ಲೇವಡಿ ಮಾಡಿದರು. ಅಕ್ರಮ ಮರಳು ಗಾರಿಕೆಯಿಂದ ಕೃಷಿ, ಮನೆಗಳು ಅಪಾಯದ ಅಂಚಿಗೆ ಸಿಲುಕಲಿದೆ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳದ ವಿಡಿಯೋವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಾಟ್ಸ್ಆ್ಯಪ್ ಸಂಖ್ಯೆ 98454491517ಗೆ ಕಳುಹಿಸುವಂತೆ ವಿನಂತಿಸಿದರು. ಇಲ್ಲಿಗೆ ಬರುವ ವಿಡಿಯೋ ಪರಿಶೀಲಿಸಿ ತನಿಖೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.