ಕರ್ನಾಟಕ

karnataka

ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ: ಮಂಗಳೂರಿನಲ್ಲಿ ಎಸ್​​ಪಿಗೆ ದೂರು ನೀಡಿದ ಪತಿ

By

Published : Sep 2, 2021, 7:22 PM IST

ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ದೂರು ನೀಡಿದ್ದು, ತನ್ನ ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ಸಂಪರ್ಕವಿದೆ ಎಂದು ತಿಳಿಸಿದ್ದಾರೆ.

husband complaint about wife over Wife's connection with terrorist organization
ಎಸ್​​ಪಿಗೆ ದೂರು ನೀಡಿದ ಪತಿ

ಮಂಗಳೂರು:ಪತ್ನಿಗೆ ಉಗ್ರ ಸಂಘಟನೆಯೊಂದಿಗೆ ನಂಟಿದ್ದು, ಈಗ ನಾಪತ್ತೆಯಾಗಿರುವುದಾಗಿ ಪತಿ ದ.ಕ.ಜಿಲ್ಲಾ ಎಸ್​​ಪಿಗೆ ದೂರು ನೀಡಿದ್ದಾರೆ.

ಎಸ್​​ಪಿಗೆ ದೂರು ನೀಡಿದ ಪತಿ

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿ ಚಿದಾನಂದ‌ ಕೆ.ಆರ್. ಎಂಬವರು ಹೆಂಡತಿ ವಿರುದ್ಧ ಈ ರೀತಿ ದೂರು ನೀಡಿದ್ದಾರೆ. ಇವರ ಪತ್ನಿ‌ ರಾಜಿ ರಾಘವನ್ ಕಳೆದ 11 ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಜುಲೈ 11ಕ್ಕೆ ಮತ್ತೆ ಊರಿಗೆ ಬಂದಿದ್ದು, ಮಗಳನ್ನು ತನ್ನೊಂದಿಗೆ ಕಳುಹಿಸಿಕೊಡಬೇಕು, ತಮ್ಮದೊಂದು ಉಗ್ರ ಸಂಘಟನೆಯಿದೆ, ಅದಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾಳೆ. ಕಳುಹಿಸದಿದ್ದಲ್ಲಿ‌ ಸಂಘಟನೆಯ ಮೂಲಕ ಶಿಕ್ಷೆ ಕೊಡಿಸುತ್ತೇನೆ ಎನ್ನುತ್ತಿದ್ದಾಳೆ. ಇದಕ್ಕೆ ಆಕೆಯ ಅಕ್ಕನ ಕುಮ್ಮಕ್ಕಿದೆ ಎಂದು ಆರೋಪಿಸಿದ್ದಾರೆ.

ಪತ್ನಿ ರಾಜಿ ರಾಘವನ್

'ಲಕ್ಷದ್ವೀಪದಿಂದ ಓರ್ವ ತನಗೆ ಕರೆ ಮಾಡಿ, 'ನೀನು ನಿನ್ನ ಮಗಳು ಹಾಗೂ ಹೆಂಡತಿಯನ್ನು ನಮ್ಮೊಂದಿಗೆ ಕಳುಹಿಸಿಕೊಡಬೇಕು. ಇಲ್ಲದಿದ್ದಲ್ಲಿ ನಾವು ಬಂದು ಕರೆದೊಯ್ಯುತ್ತೇವೆ. ನಿನಗೆ ಎಷ್ಟು ದುಡ್ಡು ಬೇಕು ಕೇರಳಕ್ಕೆ ಬಾ ಕೊಡುತ್ತೇವೆ. ನೀವು ಇಬ್ಬರನ್ನೂ ದುಬೈಗೆ ಕಳುಹಿಸಿಕೊಡಬೇಕೆಂದು' ಆತ ಒತ್ತಡ ಹಾಕುತ್ತಿದ್ದಾನೆ ಎಂದು ಚಿದಾನಂದ ಆರೋಪಿಸಿದ್ದಾರೆ.

ಎಸ್​ಪಿ ನೀಡಿದ ದೂರಿನ ಪ್ರತಿ

ಆಗಸ್ಟ್ 26 ರಂದು ರಾಜಿ ರಾಘವನ್ ನಾಪತ್ತೆ:

ಆಗಸ್ಟ್ 26 ರಂದು ರಾಜಿ ರಾಘವನ್ ಮಗಳ ಜೊತೆ‌ ರಾತ್ರಿ ಮಲಗಿದ್ದವಳು ನಸುಕಿನ ವೇಳೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ನಾವು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಮೊನ್ನೆ ಪೊಲೀಸರು ಕರೆ ಮಾಡಿ 'ಮಂಗಳೂರಿನ ವೇದಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 10 ದಿನಗಳ ಚಿಕಿತ್ಸೆ ನಡೆಯುತ್ತಿದೆ. ಅಷ್ಟರವರೆಗೆ ಕಾಯಿರಿ' ಎಂದು ಹೇಳಿದ್ದಾರೆ. ಆದರೆ ಆಕೆ ಮನೆಯಲ್ಲಿದ್ದ 95 ಸಾವಿರ ರೂ., ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎರಡು ಚಿನ್ನದ ಬಳೆ ತೆಗೆದುಕೊಂಡು ಹೋಗಿದ್ದಾಳೆ. ಆ ಬಳಿಕ ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಆದರೆ ನನಗೆ ಕೇರಳದಿಂದ ಪತ್ನಿ ಮಗಳಿಬ್ಬರನ್ನು ಕಳುಹಿಸಿ ಕೊಡಬೇಕೆಂದು ಕರೆಯ ಮೇಲೆ ಕರೆ ಬರುತ್ತಿದೆ ಎಂದು ದೂರು ನೀಡಿದ್ದಾರೆ.

ಮಗಳಿಗೆ ಎರಡು ವರ್ಷವಿರುವಾಗ ಆಕೆ ದುಬೈಗೆ ಕೆಲಸಕ್ಕೆಂದು ಹೋಗಿದ್ದು ಅಲ್ಲಿಂದ ಇಲ್ಲಿಯವರೆಗೆ ಸುಮಾರು 11 ವರ್ಷಗಳಿಂದ ಮಗಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ವರ್ಷಕ್ಕೊಂದು ಸಲ ಬಂದು‌ 15 ದಿನಗಳ ಕಾಲ ಇದ್ದು ಹೋಗುತ್ತಾಳೆ. ದುಬೈಯಲ್ಲಿ ಬಿ.ಆರ್.ಶೆಟ್ಟಿಯವರ ಸಂಸ್ಥೆಯಲ್ಲಿ ದುಡಿಯುತ್ತಿದ್ದೇನೆ ಎಂದು ಹೇಳುತ್ತಾಳೆ.ಆದರೆ ದುಬೈನಲ್ಲಿರುವ ಪಾಕಿಸ್ತಾನದ ಶಾಲೆಯೊಂದರ ಆಯಾ ಆಗಿ ದುಡಿಯುತ್ತಿದ್ದಾಳೆ. ಈಗ ಆಕೆಗೆ ಮಗಳನ್ನು ಅಲ್ಲಿಗೆ ಕರೆದೊಯ್ಯಲೇಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ಅವಳ ನಾಪತ್ತೆಯ ಹಿಂದೆ ಆಕೆಯ ಅಕ್ಕನ ಕೈವಾಡವಿದೆ ಎಂಬ ಸಂಶಯವಿದೆ ಎಂದಿದ್ದಾರೆ.

ಕೃಷಿ ಮಾಡಿ ಬದುಕುತ್ತಿರುವ ನನಗೆ ಬದುಕಿಗೆ ಯಾವುದೇ ತೊಂದರೆಯಿಲ್ಲ‌. ಇದೀಗ ಪತ್ನಿಯಿಂದ ತೊಂದರೆಯಾಗಿದ್ದು, ನನಗೂ ನನ್ನ ಮಕ್ಕಳಿಗೂ ಬದುಕಲು ಯಾವುದೇ ತೊಂದರೆಯಾಗಬಾರದು. ಅಲ್ಲದೆ ಅವಳು ದುಬೈಯಲ್ಲಿ ಯಾವ ಸಂಘಟನೆಯೊಂದಿಗಿದ್ದಾಳೆ? ಲಕ್ಷದ್ವೀಪದಿಂದ ಕರೆ ಮಾಡುವಾತ ಯಾರು ಎಂಬುದರ ಬಗ್ಗೆ ಸರಿಯಾದ ತನಿಖೆಯಾಗಲಿ ಎಂದು ಪತಿ ಚಿದಾನಂದ ಕೆ.ಆರ್. ಅಲವತ್ತುಕೊಂಡಿದ್ದಾರೆ.

ABOUT THE AUTHOR

...view details