ಕಡಬ(ದಕ್ಷಿಣ ಕನ್ನಡ): ಭಾನುವಾರ ಸಂಜೆ ಸುಳ್ಯ, ಕಡಬ, ನೆಲ್ಯಾಡಿ, ರಾಮಕುಂಜದಲ್ಲಿ ಗುಡುಗು ಸಹಿತ ಭಾರಿ ಗಾಳಿ ಮಳೆ ಸುರಿದಿದ್ದು, ಹಲವು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿವೆ.
ಸಿಡಿಲು ಬಡಿದು ಕೆಲವು ಮನೆಗಳಿಗೂ ಹಾನಿಯಾಗಿದೆ. ಗಾಳಿಯಿಂದಾಗಿ ಹಲವು ಮನೆಗಳು ನಾಶವಾಗಿದ್ದು, ಕೃಷಿ ಸೇರಿದಂತೆ ಸಾರ್ವಜನಿಕ ಆಸ್ತಿಯೂ ಹಾನಿಯಾಗಿದೆ, ಅಲ್ಲದೇ ಹಲವಾರು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡ ಎಂಬುವರ ಮನೆಗೆ ಸಿಡಿಲು ಬಡಿದಿದೆ. ಮನೆಯ ಒಂದು ಪಾರ್ಶ್ವ ಹಾನಿಗೀಡಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇನ್ನೊಂದೆಡೆ ಭಾನುವಾರ ಸಂಜೆ ಸುರಿದ ಮಳೆಗೆ ಇಚಿಲಂಪಾಡಿಯ ಪಾದೆ ನಿವಾಸಿ ಸಾಂತಪ್ಪ ಗೌಡ ಮನೆಗೆ ಹಾನಿಯಾಗಿದೆ. ಘಟನೆಯಲ್ಲಿ ಸಾಂತಪ್ಪ ಗೌಡರ ಪತ್ನಿ ನಂದಕುಮಾರಿ ಎಂಬುವರು ಗಾಯಗೊಂಡಿದ್ದಾರೆ.
ಆಲಂಕಾರು ಆತೂರು ಸುತ್ತಮುತ್ತ ಬೀಸಿದ ಭಾರೀ ಗಾಳಿಗೆ ಗೋಳಿತ್ತಡಿ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗುರುಳಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ತಡೆಯುಂಟಾಗಿತ್ತು. ಬಳಿಕ ಕಡಬ ಪೊಲೀಸರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿದ್ದಾರೆ. ಮರ ಬಿದ್ದುದರಿಂದ ವಿದ್ಯುತ್ ತಂತಿಗೆ ಹಾನಿಯಾಗಿದೆ. ಕಡಬ ತಾಲೂಕು ಕುಂತೂರು ಗ್ರಾಮದ ಎಲ್ಲಾಜೆಮೂಲೆ ಬಾಬು ನಾಯ್ಕ್ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ.
ಅದೇ ರೀತಿ ವಿದ್ಯುತ್ ಪೂರೈಕೆಯ ಮೀಟರ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ರಾಮಕುಂಜ ಆತೂರು ಬಳಿ ಶಾಲೆಗೆ ಹಾನಿಯಾಗಿದೆ. ರಾಮಕುಂಜದಲ್ಲಿ ಹಲವು ಮನೆಗಳ ಶೀಟುಗಳು, ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದೆ. ಹಲವಾರು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ನಿನ್ನೆ ರಾತ್ರಿಯಿಂದಲೇ ಮೆಸ್ಕಾಂ ಪವರ್ ಮ್ಯಾನ್ಗಳು ವಿದ್ಯುತ್ ಸಂಪರ್ಕ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಇನ್ನು ಘಟನಾ ಸ್ಥಳಗಳಿಗೆ ಕಡಬ ಕಂದಾಯ ನೀರಿಕ್ಷಕರು ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.