ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಸಾಮಾಜಿಕ, ಮಾನಸಿಕ ಸಾಂಸ್ಕೃತಿಕ ಜ್ಞಾನ ಮತ್ತು ಕೌಶಲ್ಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ . ಈ ಜಾಗತಿಕ ಸಮ್ಮೇಳನದಲ್ಲಿ ದೇಶದ ಸಾವಿರಾರು ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್‌ಗಳು, ಘಟಕದ ನಾಯಕರು, ವಿದೇಶಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಿದ್ದಾರೆ.
ಡಿಸೆಂಬರ್ 21 ರಿಂದ 7 ದಿನಗಳವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶ ಮತ್ತು ರಾಜ್ಯದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನೇಕ ಕಲಾವಿದರು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು.
ಜವಾಬ್ದಾರಿಯುತ ಪ್ರಜೆಗಳಾಗಿ ದೇಶದ ಸೇವೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೊಡುಗೆ ನೀಡಬಹುದು. ಕರ್ನಾಟಕ ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿದೆ. ಕಳೆದ 100 ವರ್ಷಗಳಲ್ಲಿ 6.50 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಸಿದ್ಧಪಡಿಸಲಾಗಿದೆ. ಸ್ವಯಂಸೇವಕರು ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೋವಿಡ್ ವಾರಿಯರ್ ಆಗಿ ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಸೇವೆ ಶ್ಲಾಘನೀಯ. ಪ್ರಧಾನ ಮಂತ್ರಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು "ಸಬ್ಕಾ ಸಾಥ್, ಸಬ್ಕಾ ವಿಕಾಸ್ ಔರ್ ಸಬ್ಕಾ ವಿಶ್ವಾಸ್" ಎಂಬ ಮಂತ್ರದ ಜೊತೆಗೆ "ಏಕ್ ಭಾರತ್, ಶ್ರೇಷ್ಠ ಭಾರತ್, ಆತ್ಮನಿರ್ಭರ್ ಭಾರತ್" ಮಿಷನ್ನಲ್ಲಿ ಕೆಲಸ ಮಾಡುತ್ತಿದೆ ಎಂದರು.