ಮಂಗಳೂರು :ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿದ್ದ ತರಕಾರಿ ಹಾಗೂ ಹಣ್ಣಿನ ಸಗಟು ವ್ಯಾಪಾರವನ್ನು ಬೈಕಂಪಾಡಿಯಲ್ಲಿರುವ ಎಪಿಎಂಸಿಗೆ ಜಿಲ್ಲಾಡಳಿತ ಸ್ಥಳಾಂತರ ಮಾಡಿರುವುದನ್ನು ಮಾಜಿ ಶಾಸಕ ಜೆ ಆರ್ ಲೋಬೊ ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವ್ಯಾಪಾರಿಗಳಿಗೆ ಸಮಯಾವಕಾಶ ನೀಡಿ ಎಪಿಎಂಸಿಗೆ ಸ್ಥಳಾಂತರ ಮಾಡಬೇಕೇ ಹೊರತು, ರಾತ್ರಿ ಬೆಳಗಾಗುವುದರೊಳಗೆ ಲಾಕ್ಡೌನ್ನಂತಹ ತುರ್ತು ಸಂದರ್ಭದಲ್ಲಿ ಸ್ಥಳಾಂತರ ಮಾಡಿರೋದು ತಪ್ಪು ಎಂದರು.
ಜನತೆಗೆ ಆಹಾರ ಸಾಮಾಗ್ರಿಗಳು ಸುಲಭವಾಗಿ ದೊರಕುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರಲ್ಲಿ ಗೊಂದಲದ ಸನ್ನಿವೇಶವನ್ನು ಸೃಷ್ಟಿ ಮಾಡಬಾರದು. ನಾಳೆ ಬೆಳಗ್ಗೆಯಿಂದ ಎಲ್ಲವೂ ಬಂದ್, ಯಾವುದೇ ವಾಹನಗಳು ರಸ್ತೆಯಲ್ಲಿ ಓಡಾಟ ಮಾಡಬಾರದು ಎಂದು ಮುನ್ನಾ ದಿನ ರಾತ್ರಿ 12 ಗಂಟೆಗೆ ಹೇಳುವುದಲ್ಲ, ಸಮಯಾವಕಾಶ ಕೊಟ್ಟು ಯಾವುದಾದರೂ ಕಾನೂನನ್ನು ಜಾರಿಗೊಳಿಸಿ. ಜನರಿಗೆ ಗೊಂದಲ ಸೃಷ್ಟಿಸುವಂತಹ ನಿರ್ಧಾರ ಬೇಡ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕಾಂಗ್ರೆಸ್‌ನಿಂದ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ಈ ಮೂಲಕ ಸರ್ಕಾರ ಎಡವಿದಲ್ಲಿ ಎಚ್ಚರಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಹಾಯ ಮಾಡುವ ಗುರಿ ಹೊಂದಿದೆ. ಇಂದು ನಮ್ಮನ್ನು ಜಾಗತಿಕ, ರಾಷ್ಟ್ರೀಯ ವಿಪತ್ತು ಕಾಡುತ್ತಿದೆ, ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿ ಒಂದಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.