ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲು ನೀಡುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಕೇಂದ್ರ ಸರ್ಕಾರ ಮರು ಅರ್ಜಿ ಸಲ್ಲಿಸಬೇಕು ಅಥವಾ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ಮಾಜಿ ಸಚಿವ ಯು. ಟಿ. ಖಾದರ್ ಒತ್ತಾಯಿಸಿದ್ದಾರೆ.
ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪು ವಿಚಾರ: ಕೇಂದ್ರ ಸರ್ಕಾರ ಮರು ಅರ್ಜಿ ಅಥವಾ ಸುಗ್ರಿವಾಜ್ಞೆ ಮಾಡಲಿ: ಯು ಟಿ ಖಾದರ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಕುರಿತು ಕೇಂದ್ರ ಸರ್ಕಾರ ತ್ವರಿತವಾಗಿ ಮತ್ತು ಗಂಭೀರತೆಯಿಂದ ಚರ್ಚಿಸಿ ಮರು ಪರಿಶೀಲನಾ ಅರ್ಜಿ ಅಥವಾ ಸುಗ್ರಿವಾಜ್ಞೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರಧಾನಮಂತ್ರಿ ಆಗಿಂದಾಗ್ಗೆ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ ಆದರೂ ಅವರ ಪಕ್ಷದ ಕೆಲವು ಸದಸ್ಯರು ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡುತ್ತಾರೆ. ಆದರೆ, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸುಪ್ರೀಂಕೋರ್ಟ್ ತೀರ್ಮಾನದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಅವರ ಬದ್ಧತೆ ಏನು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಹೆಚ್ಚಿಸಿರುವುದು ಖಂಡನೀಯ. ಒಂದು ಕಡೆ ಉದ್ಯೋಗವಿಲ್ಲ, ಜನರಲ್ಲಿ ದುಡ್ಡು ಇಲ್ಲ, ಬೆಲೆ ಏರಿಕೆ ಆಗ್ತಾ ಇದೆ. ಇದರ ನಡುವೆ ಗ್ಯಾಸ್ ದರ ಹೆಚ್ಚಳ ಮತ್ತಷ್ಟು ಭಾರ ತಂದಿದೆ ಎಂದರು.
ಇನ್ನು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆಗೆ ಹಣದ ಅವಶ್ಯಕತೆ ಇದ್ದರೆ ಶಾಸಕ ನಿಧಿಯಿಂದ 25 ಲಕ್ಷ ರೂ ಅನುದಾನ ನೀಡುವುದಾಗಿ ಘೋಷಿಸಿದ ಅವರು, ಇತ್ತೀಚೆಗೆ ಪಾವೂರು ಎಂಬಲ್ಲಿ ಮೂರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ. ಈ ವಿಚಾರದಲ್ಲಿ ಪಾವೂರು ಗ್ರಾಮಸ್ಥರು ಒಟ್ಟಾಗಿ ಆರೋಪಿಯನ್ನು ಹಿಡಿದಿದ್ದಾರೆ.
ಕ್ಷೇತ್ರದಲ್ಲಿ ಇಂತಹ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆ ಸಿಸಿಟಿವಿ ಅಳವಡಿಸಲು ಹಣದ ಅವಶ್ಯಕತೆ ಇದ್ದರೆ ಶಾಸಕ ನಿಧಿಯಿಂದ ನೀಡುತ್ತೇನೆ. ಶಾಸಕ ನಿಧಿಯಿಂದ 25 ಲಕ್ಷ ರೂ ಅನುದಾನ ನೀಡಲು ಸಿದ್ಧನಿದ್ದೇನೆ. ಕ್ಷೇತ್ರದ ರಕ್ಷಣೆಗೆ ಬೇಕಾದ ವ್ಯವಸ್ಥೆ ಪೊಲೀಸ್ ಇಲಾಖೆ ಮಾಡಲಿ ಎಂದರು.