ಮಂಗಳೂರು :ಜೆಡಿಎಸ್ ಹಾಗೂ ಬಿಜೆಪಿ ಒಟ್ಟಿಗೆ ಸೇರಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆಸುತ್ತಿವೆ. ಈ ಮೂಲಕ ಜಾತ್ಯಾತೀತ ಹಣೆಪಟ್ಟಿಯಿರುವ ಜೆಡಿಎಸ್ನ ಮುಖವಾಡ ರಾಜ್ಯದ ಜನತೆಯ ಮುಂದೆ ಬಯಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರು ತಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಹೇಳಿಕೆ ನೀಡುತ್ತಾರೆ. ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈ ರೀತಿಯ ಅಧಿಕಾರ ದಾಹವಿಲ್ಲ. ಅವರು ಅಧಿಕಾರದಿಂದ ಇಳಿಯಲು ಸಿದ್ದರಿದ್ದಾರೆ. ಇಂದಲ್ಲ, ನಾಳೆ ರಾಜೀನಾಮೆ ನೀಡುವವರಿದ್ದಾರೆ.
ಈಗಾಗಲೇ ಸರ್ಕಾರದಿಂದ ಅವರಿಗೆ ದೊರಕಿರುವ ಬಂಗಲೆ, ಕಾರು, ಪಿಎ ಎಲ್ಲವನ್ನೂ ಬಿಟ್ಟಿದ್ದು, ಕೆಎಸ್ಆರ್ಟಿಸಿ ಬಸ್ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್ ಮುಖವಾಡ ಕಳಚಬೇಕೆಂದು, ಇದನ್ನು ಅಂತಿಮ ಹಂತಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದರು.