ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ವಿಪರೀತ ಸೆಕೆ ಮತ್ತೊಂದೆಡೆ ನೀರಿನ ಸಮಸ್ಯೆ ಎದುರಾಗಿದೆ. ಹಿಂದೆಂದೂ ಇಲ್ಲದ ಈ ರೀತಿಯ ಸಮಸ್ಯೆಗೆ ಎತ್ತಿನಹೊಳೆ ಯೋಜನೆ ಸೇರಿದಂತೆ ಪರಿಸರದ ಮೇಲಿನ ಹಾನಿಯೇ ಕಾರಣ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ನೀರಿನ ಸಮಸ್ಯೆಗೆ ಎತ್ತಿನಹೊಳೆ ಯೋಜನೆ ಕಾರಣ: ಪರಿಸರವಾದಿಗಳ ಆರೋಪ ಕಳೆದ ವರ್ಷವೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಲಾಗಿತ್ತು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯನ್ನು ರೇಶನಿಂಗ್ ಮಾಡಲಾಗಿದೆ. ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಆದರೆ ಇದೀಗ ನೇತ್ರಾವತಿ ನದಿಯಲ್ಲಿ ನೀರು ಬತ್ತಲು ಕಾರಣ ಸರ್ಕಾರ ಎತ್ತಿನಹೊಳೆ ಯೋಜನೆ ಮಾಡಿರುವುದು ಎಂಬುದು ಪರಿಸರವಾದಿಗಳ ಆರೋಪ.
ಎತ್ತಿನಹೊಳೆ ಯೋಜನೆಗೆ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಹಾನಿ ಮಾಡಲಾಗಿದೆ. ನೀರು ಹರಿದು ಬರುವ ಮೂಲಕ್ಕೆ ಹಾನಿ ಮಾಡಲಾಗಿದೆ. ಅದೇ ರೀತಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಹರಿದು ಬರುವ ಒಂಭತ್ತು ಹೊಳೆಗಳ ನೀರಿನ ಮೂಲಕ್ಕೆ ಹಾನಿ ಮಾಡಲಾಗಿದೆ. ಇಂತಹ ಹಾನಿಗಳೇ ಇದೀಗ ಜಿಲ್ಲೆಯಲ್ಲಿ ಹೆಚ್ಚಿರುವ ತಾಪಮಾನಕ್ಕೆ, ನೀರು ಸಮಸ್ಯೆ ಉಂಟಾಗಲು ಕಾರಣವೆಂದು ಆರೋಪಿಸಲಾಗಿದೆ.
ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ಮೊದಲೇ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ದಕ್ಷಿಣ ಕನ್ನಡ ಜಿಲ್ಲೆಯ ಮುಂದಿನ ಪರಿಸ್ಥಿತಿ ಏನು ಎಂಬ ಆತಂಕ ಮೂಡಿದೆ. ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಲು ಸಾಧ್ಯವಾಗದಿದ್ದರೆ ನೇತ್ರಾವತಿ ತಿರುವು ಮಾಡುವ ಸಾಧ್ಯತೆಯಿರುವುದರಿಂದ ಮುಂದೆ ಇನ್ನಷ್ಟು ಸಮಸ್ಯೆ ಉದ್ಭವವಾಗಲಿದೆ ಎಂಬ ಆತಂಕ ಪರಿಸರವಾದಿಗಳದು. ಮುಂದೆ ಪರಿಸರಕ್ಕೆ ಪೂರಕವಾದ ಶಾಶ್ವತ ಯೋಜನೆ ಮಾಡದಿದ್ದಲ್ಲಿ ಇನ್ನಷ್ಟು ಸಮಸ್ಯೆಗಳು ಮುಂದಿನ ದಿನದಲ್ಲಿ ಎದುರಿಸಬಹುದೆಂಬ ಆತಂಕ ಕಾಡುತ್ತಿದೆ.