ಮಂಗಳೂರು:ನಮಗೆ ನಿತ್ಯ ಬಳಕೆಗೆ ಬೇಕಾಗುವ ಹಾಲು, ಮೊಸರು, ಮಜ್ಜಿಗೆ ಹಾಗೂ ಇತರ ಸಾಮಗ್ರಿಗಳನ್ನು ಕಿರಾಣಿ ಅಂಗಡಿಗೆ ಹೋಗಿ ತರದೇ ಬೇರೆ ದಾರಿ ಇಲ್ಲ. ಆದರೆ, ಅಲ್ಲಿಂದ ತಂದ ಮತ್ತು ಇದಕ್ಕೆ ಬಳಸಿದ ಪ್ಲಾಸ್ಟಿಕ್ ಅನ್ನು ಸಾಧಾರಣವಾಗಿ ಜನರು ತ್ಯಾಜ್ಯಕ್ಕೆ ಎಸೆದು ಕೈತೊಳೆದುಕೊಳ್ಳುತ್ತಾರೆ. ಅದೇ ರೀತಿ ಕೆಲವು ದಿನಪತ್ರಿಕೆಗಳು ರದ್ದಿಗೆ ಹೋದರೆ ಇನ್ನು ಕೆಲವು ತ್ಯಾಜ್ಯಕ್ಕೆ ಹೋಗುತ್ತವೆ.
ಇದನ್ನೂ ಓದಿ: ಕೇಂದ್ರ ನಿರ್ಧಾರಕ್ಕೆ ಕಂಗಾಲಾದ ಅನ್ನದಾತ: ರಾಷ್ಟ್ರಧ್ವಜ ತಯಾರಿಕೆಗೆ ಇನ್ನೂ ಮುಂದೆ ಬೇಕಿಲ್ಲ ಹತ್ತಿ
ಆದರೆ, ಇವುಗಳನ್ನು ಪುನರ್ಬಳಕೆ ಮಾಡಿ ಪರಿಸರ ಉಳಿಸಲು ಸಾಧ್ಯವೇ ಎಂದು ಯಾರು - ಯಾವತ್ತೂ ಆಲೋಚನೆ ಮಾಡಲ್ಲ. ಇದರ ನಡುವೆ ಪರಿಸರ ಕಾಳಜಿ ಹೊಂದಿರುವ ಮಂಗಳೂರಿನ ವಿದ್ಯಾರ್ಥಿಗಳ ತಂಡವೊಂದು ಇಂತಹದ್ದೊಂದು ಹೊಸ ಅಭಿಯಾನ ನಡೆಸುತ್ತಿದೆ. ಈ ಮೂಲಕ ಕಸದಿಂದ ರಸ ತೆಗೆಯುವ ಸಾಹಸ ಮಾಡುತ್ತಿದೆ.
ಗ್ರೀನ್ ವಾರಿಯರ್ ತಂಡದಿಂದ ಪರಿಸರ ಜಾಗೃತಿ ಮಂಗಳೂರಿನಲ್ಲಿ ಸುಮಾರು 5 ವರ್ಷಗಳಿಂದ ಗ್ರೀನ್ ವಾರಿಯರ್ ಅನ್ನುವ ಈ ವಿದ್ಯಾರ್ಥಿಗಳ ತಂಡ ಪರಿಸರ ಉಳಿವಿಗಾಗಿ ಜಾಗೃತಿ ಕಾರ್ಯ ಮಾಡುತ್ತಿದೆ. ಪುಟ್ಟ- ಪುಟ್ಟ ಮಕ್ಕಳೇ ಸೇರಿಕೊಂಡು ಪರಿಸರ ಉಳಿವಿಗಾಗಿ ಕಟ್ಟಿಕೊಂಡ ತಂಡವಿದು. ಇದರಲ್ಲಿ ಬೇರೆ ಬೇರೆ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 50 ವಿದ್ಯಾರ್ಥಿಗಳು ಸಹ ತೊಡಗಿಸಿಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗ್ರೀನ್ ವಾರಿಯರ್ ವಿದ್ಯಾರ್ಥಿಗಳ ತಂಡ ಪರಿಸರ ನಾಶದ ವಿರುದ್ಧ, ಪರಿಸರ ಉಳಿವಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಜಗತ್ತಿನಲ್ಲಿ ಇತ್ತೀಚೆಗೆ ಹವಾಮಾನ ವೈಪರೀತ್ಯಗಳಿಂದ ಆಗುತ್ತಿರುವ ಹಾನಿ ಮತ್ತು ವಿದ್ಯಮಾನಗಳನ್ನು ಅರಿತುಕೊಂಡ ಈ ಗ್ರೀನ್ ವಾರಿಯರ್ ತಂಡ ಪರಿಸರ ಉಳಿವಿಗಾಗಿ ಹೊಸ ಹೆಜ್ಜೆ ಇಟ್ಟಿದೆ.
ಮಂಗಳೂರಿನಲ್ಲಿ ಗ್ರೀನ್ ವಾರಿಯರ್ ತಂಡದಿಂದ ಪರಿಸರ ಜಾಗೃತಿ ಮರು ಸಂಸ್ಕರಣೆಯ ಜಾಗೃತಿ:ಹಾಲು, ಮೊಸರು ಹಾಗೂ ಇತರ ಪದಾರ್ಥಗಳಿಗೆ ಬಳಸಲಾಗುವ ಪ್ಲಾಸ್ಟಿಕ್ ಮರುಸಂಸ್ಕರಣೆ ಮಾಡಲು ಸಾಧ್ಯವಾಗುವಂತಹ ಪ್ಲಾಸ್ಟಿಕ್. ಹಾಗಾಗಿ ಈ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲು ಸಾಧ್ಯವಿದ್ದರೂ ಜನರು ಅದರ ಅರಿವು ಇಲ್ಲದೇ ಇರುವುದರಿಂದ ತ್ಯಾಜ್ಯಕ್ಕೆ ಎಸೆಯುವುದುಂಟು. ಕೆಲವರು ಅಸಡ್ಯ ತೋರಿದರೆ ಮತ್ತೆ ಕೆಲವರು ನಾನೊಬ್ಬನೇ ಮಾಡಿದರೆ ಪ್ರಯೋಜನವೇನು ಅನ್ನೋ ಮಾತು.
ಅದನ್ನೆಲ್ಲ ಮನಗಂಡ ಈ ಪುಟ್ಟ ವಿದ್ಯಾರ್ಥಿಗಳ ತಂಡ ಪರಿಸರ ರಕ್ಷಣೆ ಮಾಡುವುದಷ್ಟೇ ಅಲ್ಲ ಹಾಲಿನ ಪ್ಲಾಸ್ಟಿಕ್ನಿಂದ ಆಟಿಕೆ ತಯಾರಿಸುವ ಮುಂಬಯಿ ಸಂಸ್ಥೆ ಜೊತೆಗೆ ಮಾತುಕತೆ ನಡೆಸಿದೆಯಂತೆ. ಮಂಗಳೂರಿನಿಂದ ಬಿಸಾಡುವ ಹಾಲಿನ ಪ್ಯಾಕೆಟ್ಗಳನ್ನು ಸಂಗ್ರಹಿಸಿ ಕೊಡುವ ಬಗ್ಗೆ ಮಾತುಕತೆ ನಡೆಸಿದೆ.
ಅದಕ್ಕಾಗಿ ಈ ವಿದ್ಯಾರ್ಥಿಗಳ ತಂಡ ಜೆಪ್ಪಿನಮೊಗರು, ಎಕ್ಕೂರು ಪರಿಸರದಲ್ಲಿ ಮನೆಮನೆಗೆ ಹೋಗಿ ಜಾಗೃತಿ ಮಾಡಿದೆ. ನೀವು ಮನೆಯಲ್ಲಿ ಬಳಸುವ ಹಾಲಿನ ಪ್ಯಾಕೆಟ್ ಬಿಸಾಡದೇ ಅದನ್ನು ತೊಳೆದಿಟ್ಟು ಸಂಗ್ರಹಿಸಿಟ್ಟರೆ ಮೂರು ತಿಂಗಳಿಗೊಮ್ಮೆ ಮನೆಗೆ ಬಂದು ಸಂಗ್ರಹಿಸುತ್ತೇವೆ ಎಂದು ಜಾಗೃತಿ ಮೂಡಿಸಿದ್ದಾರೆ.
ಗ್ರೀನ್ ವಾರಿಯರ್ ತಂಡದಿಂದ ಪರಿಸರ ಜಾಗೃತಿ ದಿನಪತ್ರಿಕೆಗಳಿಂದ ಪೆನ್ಸಿಲ್ ತಯಾರಿಕೆ:ಅದೇ ರೀತಿ ಹಳೆಯ ದಿನಪತ್ರಿಕೆಗಳಿಂದ ಪೆನ್ಸಿಲ್ ತಯಾರಿಕೆ ಮಾಡುವ ಸಂಸ್ಥೆ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದು, ದಿನಪತ್ರಿಕೆಗಳನ್ನು ಸಂಗ್ರಹಿಸುವ ಬಗ್ಗೆ ಮನೆ ಮನೆಗೆ ಪ್ರಚಾರ ನಡೆಸಿದ್ದಾರೆ. ಜೊತೆಗೆ ಮಕ್ಕಳ ತಿಂಡಿಯ ಪ್ಯಾಕೆಟ್ ಅನ್ನು ಬಿಸಾಡದೇ ಅದನ್ನು ನಿರ್ವಹಣೆ ಮಾಡುವ ಬಗ್ಗೆ ಜಾಗೃತಿ ನೀಡುತ್ತಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯಿಂದ ನಿಯಮ ಉಲ್ಲಂಘನೆ ಆರೋಪ.. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಈಗಾಗಲೇ ವಿದ್ಯಾರ್ಥಿಗಳ ಈ ತಂಡ ಮಾಡುತ್ತಿರುವ ಜಾಗೃತಿಗೆ ಜನರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಜೊತೆಗೆ ಈ ತಂಡ ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಪ್ರಚಾರ ನಡೆಸುತ್ತಿದೆ. ಒಟ್ಟಿನಲ್ಲಿ ಪರಿಸರ ಉಳಿವಿಗಾಗಿ ವಿದ್ಯಾರ್ಥಿಗಳ ತಂಡ ಮಾಡುತ್ತಿರುವ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.