ಮಂಗಳೂರು:ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಜನರ ಜೀವ ಉಳಿಸುವಲ್ಲಿ ಮಹತ್ತರವಾದ ಹೆಜ್ಜೆ ಇರಿಸಿದ್ದು, ದ.ಕ.ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಗೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ. ಈ ಇಸಿಜಿ ಯಂತ್ರವನ್ನು ಗ್ರಾಮಸ್ಥರೇ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಕ್ಯಾಡ್ ಗ್ಯಾಪ್ (ಗ್ರಾಮ ಪಂಚಾಯಿತಿ ಅಂಗನವಾಡಿ ಪ್ರಾಜೆಕ್ಟ್) ಹೆಸರಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಡಾ. ಕಾಮತ್ ಅವರು ಈಗಾಗಲೇ ರಾಜ್ಯದ 25 ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ 380ಕ್ಕೂ ಅಧಿಕ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. ಒಂದು ಇಸಿಜಿ ಯಂತ್ರಕ್ಕೆ 33 ಸಾವಿರ ರೂ. ಇದೆ. ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿಗೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದಲ್ಲಿ ಗ್ರಾಮ ಮಟ್ಟದ ಜನರು ಶೀಘ್ರವೇ ಇದರ ಪ್ರಯೋಜನ ಪಡೆಯಲು ಸಾಧ್ಯ.