ಮಂಗಳೂರು: ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಷ್ಟವಾಗಿದ್ದು, ಕೂಡಲೇ ಈ ಕುರಿತ ಕಾನೂನು ಜಾರಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಗೋವಿನ ಹತ್ಯೆಯನ್ನು ನಿಷೇಧಿಸುವ ಕಾನೂನು ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಈ ಕುರಿತು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದೇಶದೆಲ್ಲೆಡೆ ಇದೀಗ ಚರ್ಚೆಯಲ್ಲಿರುವ ಲವ್ ಜಿಹಾದ್ ತಡೆ ಕಾನೂನು ವಿಚಾರವಾಗಿಯೂ ರಾಜ್ಯ ಸರ್ಕಾರ ಬಹಳ ಸ್ಪಷ್ಟತೆ ಹೊಂದಿದ್ದು, ಈ ಎರಡೂ ಕಾನೂನು ಜಾರಿಗೆ ತರಲು ಸ್ವತಃ ಮುಖ್ಯಮಂತ್ರಿಗಳೇ ನಿರ್ಧರಿಸಿದ್ದಾರೆ ಎಂದು ಡಿಸಿಎಂ ಹೇಳಿದರು.
ಗೋಹತ್ಯೆ ನಿಷೇಧಿಸುವ ಕಾನೂನು ತರುವುದಕ್ಕೆ ಸರ್ಕಾರ ಬದ್ಧ: ಡಿಸಿಎಂ ಈ ಎರಡೂ ಕಾನೂನುಗಳು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ಬರಲಿವೆ. ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ವಿವಾದದ ಕುರಿತು ಮಾತನಾಡಿದ ಅವರು, ಎಲ್ಲಾ ಜಾತಿ, ಜನಾಂಗದವರಿಗೆ ಪ್ರಾಧಿಕಾರ ಕೇಳುವ ಹಕ್ಕಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲಾ ಜಾತಿ, ಜನಾಂಗಕ್ಕೂ ಪ್ರಾಧಿಕಾರವನ್ನು ಕೊಡುವ ಅಗತ್ಯವಿದೆ ಎಂದ ಅವರು, ಸರ್ಕಾರ ಸೀಮಿತ ಕಾಲಾವಧಿಯಲ್ಲಿ ಈ ಕೆಲಸವನ್ನು ಮಾಡಲಿದೆ ಎಂದರು. ಸಿಎಂ ಬಿಎಸ್ವೈ ಪಿಎ ಸಂತೋಷ್ ಆತ್ಮಹತ್ಯೆ ಯತ್ನದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದರು.
ರಾಜ್ಯದಲ್ಲಿ ಕೋವಿಡ್ ಸವಾಲಿನ ನಡುವೆಯೂ ಕಳೆದ ಬಾರಿಯ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಲಾಗಿದೆ. ಇದೀಗ ರಾಜ್ಯದ ಎಲ್ಲಾ ಕಡೆಗಳಲ್ಲಿ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಗಿದೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಹಿಂದಿನ ವರ್ಷದ ಶೈಕ್ಷಣಿಕ ವರ್ಷವನ್ನೇ ಪೂರ್ಣಗೊಳಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್ಲೈನ್ ಹಾಗೂ ಆಫ್ ಲೈನ್ ಶಿಕ್ಷಣದ ಅವಕಾಶವನ್ನೂ ನೀಡಲಾಗಿದೆ ಎಂದರು.
ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕುರಿತಂತೆ ಕಠಿಣ ಕಾನೂನು ತರುವಂತೆ ಹಾಗೂ ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ಕಾಯಂ ಅರ್ಚಕರನ್ನು ನೇಮಿಸುವಂತೆ ಆಗ್ರಹಿಸಿ ಬಜರಂಗದಳ ದಕ್ಷಿಣ ಪ್ರಾಂತದ ವತಿಯಿಂದ ಪುತ್ತೂರಿನಲ್ಲಿ ಮನವಿ ಸಲ್ಲಿಸಲಾಯಿತು.