ಮಂಗಳೂರು:ಸುರತ್ಕಲ್ನ ಎನ್‌ಐಟಿಕೆ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಇಂದು ಸುರತ್ಕಲ್ ಟೋಲ್ ಗೇಟ್ನಿಂದ 200 ಮೀಟರ್ ದೂರದಲ್ಲಿ ಹಗಲು ರಾತ್ರಿ ಧರಣಿ ಆರಂಭವಾಗಿದೆ. ಟೋಲ್ ಗೇಟ್ ವಿರುದ್ದ ಹೋರಾಟದ ಹಿನ್ನೆಲೆಯಲ್ಲಿ ಇಂದಿನಿಂದ ಸುರತ್ಕಲ್ ಎನ್‌ಐಟಿಕೆ ಟೋಲ್ ಗೇಟ್ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದರು.
ಟೋಲ್ ಗೇಟ್ ಸುತ್ತಲಿನ 200 ಮೀಟರ್ ಹೊರತುಪಡಿಸಿ ಹೊರ ಭಾಗದಲ್ಲಿ, ಸುರತ್ಕಲ್ ಎನ್‌ಐಟಿಕೆ ಟೋಲ್ ಗೇಟ್ನ ಸಮೀಪದಲ್ಲಿ ಇಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ಆರಂಭಿಸಿದ್ದಾರೆ.
144 ಸೆಕ್ಷನ್ ವ್ಯಾಪ್ತಿಯ ಹೊರಭಾಗದಲ್ಲಿ ಟೋಲ್ ಗೇಟ್ ವಿರುದ್ದ ಹಗಲು ರಾತ್ರಿ ಧರಣಿ ಆರಂಭ ಈ ಧರಣಿಯಲ್ಲಿ ಮಾಜಿ ಸಚಿವರಾದ ಬಿ ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಕಾಂಗ್ರೆಸ್ ಮುಖಂಡರಾದ ಪ್ರತಿಭಾ ಕುಳಾಯಿ, ನಾಗೇಶ್ ಉದ್ಯಾವರ, ರಮೇಶ್ ಕಾಂಚನ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐ ಮುಖಂಡ ಬಿ ಶೇಖರ್, ಕರುಣಾಕರ ಮಾರಿಪಳ್ಳ, ವಿ ಕುಕ್ಯಾನ್, ಸಿಪಿಎಂ ಮುಖಂಡ ಯೋಗೀಶ್ ಜೆಪ್ಪಿನಮೊಗರು ಡಿವೈಎಫ್ಐ ಮುಖಂಡ ಬಿ ಕೆ ಇಮ್ತಿಯಾಜ್, ವಕೀಲ ದಿನೇಶ್ ಹೆಗ್ಡೆ ಮೊದಲಾದವರು ನೇತೃತ್ವ ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎನ್‌ಐಟಿಕೆ ಟೋಲ್ ಗೇಟ್ ಮುಚ್ಚುವವರೆಗೆ ನಾವು ಇಲ್ಲಿ ಶಾಂತಿಯುತ ಹೋರಾಟ ಮಾಡುತ್ತೇವೆ. ಸಂಸದ ನಳಿನ್ ಕುಮಾರ್ ಅವರು ಟೋಲ್ ಗೇಟ್ ತೆರವು ಮಾಡುವ ಭರವಸೆ ನೀಡಿದಂತೆ ನವೆಂಬರ್ 7ಕ್ಕೆ ಮುಕ್ತಾಯವಾಗಲಿದೆ.
ಅಲ್ಲಿಯವರೆಗೆ ಇದೇ ರೀತಿ ಧರಣಿ ಕುಳಿತು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಟೋಲ್ ಮುಚ್ಚದಿದ್ದರೆ ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಅಧಿಕಾರದಲ್ಲಿ ಇರುವ ಅವರು ಕೋರ್ಟ್ಗೆ ಹೋಗುವ ಬದಲು ಇದನ್ನು ಮಾಡಲಾಗದೆ ಇರುವುದಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಮಾತನಾಡಿ, ಇದು ಜನಪರ ಹೋರಾಟ, ಟೋಲ್ ಗೇಟ್ ತೆರವು ಆಗುವವರೆಗೆ ಶಾಂತಿಯುತ ಹೋರಾಟ ಮಾಡುತ್ತೇವೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಜನರು ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಇಂದಿನಿಂದ ಎನ್‌ಐಟಿಕೆ ಟೋಲ್ಗೇಟ್ ವಿರುದ್ದ ಹಗಲು ರಾತ್ರಿ ಧರಣಿ.. 144 ಸೆಕ್ಷನ್ ಜಾರಿಗೊಳಿಸಿದ ಕಮಿಷನರ್