ಮಂಗಳೂರು:ನಗರದ ಬೀದಿಬದಿ ವ್ಯಾಪಾರಿಗಳು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ 'ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ'ವನ್ನು ಆರಂಭಿಸಿದ್ದಾರೆ. ತಮ್ಮ ವ್ಯವಹಾರ ನಡೆಸಲು ಇತರರ ಮೇಲಿನ ಅವಲಂಬನೆ ತಪ್ಪಿಸುವುದೇ ಸಂಘ ಸ್ಥಾಪನೆಯ ಹಿಂದಿನ ಉದ್ದೇಶ.
ನಗರದ ಬೀದಿಗಳಲ್ಲಿ ನೂರಾರು ವ್ಯಾಪಾರಿಗಳು ತಮ್ಮ ವ್ಯಾಪಾರ ನಡೆಸುತ್ತಿದ್ದಾರೆ. ಈ ವ್ಯಾಪಾರಿಗಳು ಆರ್ಥಿಕವಾಗಿ ಸಬಲರಲ್ಲ. ತಮ್ಮ ದಿನನಿತ್ಯದ ವ್ಯಾಪಾರಕ್ಕಾಗಿ ಇರುವ ಇತರರಿಂದ ಹಣ ಪಡೆಯುತ್ತಾರೆ. ಕೆಲವೊಮ್ಮೆ ಮೀಟರ್ ಬಡ್ಡಿದಾರರ ಮೊರೆ ಹೋಗುತ್ತಾರೆ. ಈ ಮೀಟರ್ ಬಡ್ಡಿದಾರರಿಂದ ಪಡೆದ ಸಾಲ ತೀರಿಸಲು ವ್ಯಾಪಾರದಿಂದ ಗಳಿಸಿದ ಲಾಭಗಳನ್ನು ವ್ಯಯಿಸುವಂತಾಗಿದೆ. ಇದನ್ನು ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘವು ದಕ್ಷಿಣ ಕನ್ನಡ ಬೀದಿ ಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಆರಂಭಿಸಿದೆ.
ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, "ಬೀದಿ ಬದಿ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಮೀಟರ್ ಬಡ್ಡಿ ವ್ಯಾಪಾರಿಗಳ ಮೊರೆ ಹೋಗಿ ಸಂಕಷ್ಟಕ್ಕೀಡಾಗುತ್ತಾರೆ. ಮತ್ತೊಂದೆಡೆ, ನಕಲಿ ಕಂಪನಿಗಳು ಅಧಿಕ ಲಾಭದ ಆಸೆ ತೋರಿಸಿ ಬೀದಿ ಬದಿ ವ್ಯಾಪಾರಿಗಳ ಹಣ ದೋಚುತ್ತಿದ್ದಾರೆ. ಇದನ್ನು ತಡೆಯಲು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸು ನೆರವು ನೀಡಲು, ಅವರ ಹಣವನ್ನು ಹೂಡಿಕೆ ಮಾಡಲು ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ" ಎಂದು ತಿಳಿಸಿದರು.