ಕರ್ನಾಟಕ

karnataka

By

Published : Apr 25, 2020, 4:02 PM IST

ETV Bharat / state

ಲಾಕ್​​ಡೌನ್​ ಸಮಯವನ್ನ ಧರ್ಮಸ್ಥಳದ ಧರ್ಮಾಧಿಕಾರಿ ಬಳಸಿಕೊಂಡಿರೋದು ಹೀಗೆ!

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲಾಕ್ ಡೌನ್ ಪರಿಪಾಲನೆ ಯಾವ ರೀತಿಯಲ್ಲಿ ಮಾಡಿದ್ದಾರೆ ಎಂದು ಸಂಪೂರ್ಣ ಮಾಹಿತಿ ನೀಡಿದ್ದಾರೆ.

Veerendra Hegde
ವೀರೇಂದ್ರ ಹೆಗ್ಗಡೆ

ಮಂಗಳೂರು:ಧರ್ಮಸ್ಥಳ ಕ್ಷೇತ್ರದಲ್ಲಿಯೇ ಇದ್ದುಕೊಂಡು ಸಂಪೂರ್ಣವಾಗಿ ಲಾಕ್ ಡೌನ್ ಪರಿಪಾಲನೆ ಮಾಡಿದ್ದೇನೆ. ಭಕ್ತರೂ ಕಳೆದ 40 ದಿನಗಳಿಂದ ಕ್ಷೇತ್ರಕ್ಕೆ ಬರದೇ ಸಹಕರಿಸಿದ್ದಾರೆ. ದೇವಸ್ಥಾನ, ಜೈನ ಮಂದಿರ, ಪ್ರವಚನ, ಓದು, ಸಿನಿಮಾ ವೀಕ್ಷಣೆಗಳಲ್ಲಿಯೇ ಸಂಪೂರ್ಣ ತೊಡಗಿಸಿಕೊಂಡಿದ್ದೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

ಹೀಗೆ ಲಾಕ್ ಡೌನ್ ಅವಧಿಯಲ್ಲಿ ತನ್ನ ದಿನಚರಿ ಬಗ್ಗೆ ಈಟಿವಿ ಭಾರತ್​ದೊಂದಿಗೆ ವಿವರಿಸಿದ ಅವರು, ರಾಜಧರ್ಮ, ಕಾಲಧರ್ಮ ಹಾಗೂ ವ್ಯವಹಾರ ಧರ್ಮ ಎಲ್ಲವನ್ನೂ ಪಾಲಿಸುತ್ತಿದ್ದೇನೆ. ದೇಶದ (ರಾಜ) ಪ್ರಧಾನಿಯ ಆದೇಶವನ್ನು ಕ್ಷೇತ್ರ ಬಿಟ್ಟು ತೆರಳದೇ ರಾಜಧರ್ಮವನ್ನು ಪಾಲಿಸುತ್ತಿದ್ದು, ಈ ಕಾಲದ ಸಂದಿಗ್ಧ ಸ್ಥಿತಿಗೆ ಅನುಗುಣವಾಗಿ ಕಾಲ ಧರ್ಮವನ್ನು ಪಾಲಿಸುತ್ತಿದ್ದೇನೆ. ಜೊತೆಗೆ ವ್ಯವಹಾರ ಧರ್ಮ, ಸಾಂಸಾರಿಕ ಧರ್ಮವನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.

ಲಾಕ್ ಡೌನ್ ಆರಂಭವಾಗಿ ಕಳೆದ 40 ದಿನಗಳಲ್ಲಿ ನನ್ನ ಏಳುವ ಸಮಯ ಅರ್ಧಗಂಟೆ ಲೇಟ್ ಆಗಿದೆ. ಹಿಂದೆ ಬೆಳಗ್ಗೆ 6ಕ್ಕೆ ಏಳ್ತಿದ್ದೆ ಈಗ 6.30ಗೆ ಎದ್ದು ನಿತ್ಯಕರ್ಮ ಮುಗಿಸಿ, ಯೋಗ ಮಾಡಿ ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲಿ ತುಲಾಭಾರ ಮುಂತಾದ ಸೇವೆ ಇರದ ಕಾರಣ ದೇವರ ದರ್ಶನ ಮುಗಿಸಿ ಸೀದಾ ಬೀಡಿಗೆ ಬಂದು ಜಿನ ಮಂದಿರದಲ್ಲಿ ಪೂಜೆ, ಪ್ರಾರ್ಥನೆ ಮುಗಿಸುತ್ತೇನೆ. ಆ ಬಳಿಕ ಬೆಳಗ್ಗಿನ ಫಲಹಾರ ಮುಗಿಸುತ್ತೇನೆ. ಲಾಕೌ ಡೌನ್ ಆದ ದಿನಗಳಿಂದ ಯಾರೂ ಭೇಟಿ‌ ಮಾಡದ ಕಾರಣ ಪಟ್ಟದ ಪೀಠದಲ್ಲಿಯೂ ಕೂರದೇ 40 ದಿನಗಳಾಗಿವೆ ಎಂದು ಮಾಹಿತಿ ನೀಡಿದರು.

ಆ ಬಳಿಕ ಪ್ರವಚನಗಳಿಗೆ ಬೇಕಾದ ವಿಷಯಗಳನ್ನು ಬರೆಯುತ್ತೇನೆ. ಈ ಟಿಪ್ಪಣಿಗಳ ನೋಟ್ಸ್ ಬರೆಯುವುದರೊಂದಿಗೆ ನನ್ನ ಜೀವನಾನುಭವದಿಂದ ಲಭ್ಯವಾದ ವಿಷಯಗಳನ್ನು ಇರಿಸಿ ಸಣ್ಣ ಸಣ್ಣ ಲೇಖನ ಬರೆಯುತ್ತಿರುತ್ತೇನೆ. ಜೊತೆಗೆ ಒಂದಷ್ಟು ಪುಸ್ತಕಗಳನ್ನು ಓದುತ್ತಿದ್ದೇನೆ. ಇಸ್ಕಾನ್ ನವರ ರಾಮಾಯಣ ಹಾಗೂ ಅನಂತರಾಮುರವರ ರಾಮಾಯಣ ಓದಿ ಮುಗಿಸಿದೆ. ಈ ಓದು ಖುಷಿ ಕೊಟ್ಟಿದೆ ಎಂದು ತಮ್ಮ ಬೆಳಗ್ಗಿನ ದಿನಚರಿಯನ್ನು ಡಾ.ವೀರೇಂದ್ರ ಹೆಗ್ಗಡೆಯವರು ವಿವರಿಸಿದರು.

ಇನ್ನು ಮಧ್ಯಾಹ್ನ 12 ರಿಂದ 12.30 ವರೆಗೆ ಉಜಿರೆಯ ಯಕ್ಷಗಾನ ವಿದ್ವಾಂಸರೋರ್ವರು ಬಂದು ನಮ್ಮ ಕುಟುಂಬದ 10-12 ಮಂದಿಗಾಗಿ ರಾಮಾಯಣ ಕಥಾಶ್ರವಣ ನಡೆಸುತ್ತಿದ್ದಾರೆ. ಈ ಮೂಲಕ ರಾಮಾಯಣದ ಮೂಲ ಕಥೆಯೊಂದಿಗೆ ಉಪಕಥೆ, ಪ್ರವಚನ, ವಿವರಣೆಗಳನ್ನು ವಿಸ್ತಾರವಾಗಿ ಹೇಳುತ್ತಾರೆ. ಈ ಮೂಲಕ ಸಮಯವೂ ಚೆನ್ನಾಗಿ ಕಳೆಯುತ್ತದೆ. ಅಧ್ಯಯನ ಯೋಗ್ಯವಾಗಿಯೂ ಇರಲಿದೆ. ಮಧ್ಯಾಹ್ನ 2ಕ್ಕೆ ಭೋಜನ, ಬಳಿಕ ಸ್ವಲ್ಪ ಕಾಲ ವಿಶ್ರಾಂತಿ ಮಾಡುತ್ತೇನೆ ಎಂದರು.

ಇನ್ನು ಬಳಿಕ 4 ಗಂಟೆಯಿಂದ 6ರ ತನಕ ಮ್ಯೂಸಿಯಂಗೆ ಹೋಗಿ ಪ್ರಾಚ್ಯ ವಸ್ತುಗಳನ್ನು ತುಕ್ಕು ಹಿಡಿಯದಂತೆ ರಕ್ಷಣೆಗೆ ಬೇಕಾಗಿ ಸ್ವಲ್ಪ ಕಾಲ ಕಳೆಯುತ್ತೇನೆ. ಅಲ್ಲಿಂದ ಕಾರ್ ಮ್ಯೂಸಿಯಂಗೆ ಹೋಗುತ್ತಿದ್ದೇನೆ. ಇದೀಗ 30 ಕಾರುಗಳು ಸ್ಟಾರ್ಟಿಂಗ್ ಕಂಡಿಷನ್​​ಗೆ ಬಂದಿದೆ ಎಂದು ವಿವರಿಸಿದರು. ರಾತ್ರಿ ಹೊತ್ತು ಟಿವಿ ನೋಡುವುದು ಕನ್ನಡ, ಹಿಂದಿ, ಇಂಗ್ಲೀಷ್ ಮುಂತಾದ ಹಳೆಯ ಸಿನಿಮಾ ವೀಕ್ಷಣೆ ಮಾಡುತ್ತೇನೆ ಎಂದರು.

ABOUT THE AUTHOR

...view details