ಪುತ್ತೂರು (ದಕ್ಷಿಣಕನ್ನಡ):ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರಿಗೆ ನಿರಂತರ ಹಣ್ಣು ಹಂಪಲುಗಳನ್ನೊಳಗೊಂಡ ಪೌಷ್ಠಿಕ ಆಹಾರ ನೀಡುವ ಕಾರುಣ್ಯ ಸೇವೆಯನ್ನು ಇ ಫ್ರೆಂಡ್ಸ್ ತಂಡ ಆರಂಭಿಸಿದ್ದು, ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.
ಕೋವಿಡ್ ರೋಗಿಗಳಿಗೆ ನಿರಂತರ ಪೌಷ್ಠಿಕ ಆಹಾರ: ಇ ಫ್ರೆಂಡ್ಸ್ ವತಿಯಿಂದ ಕಾರುಣ್ಯ ಸೇವೆ
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರಿಗೆ ನಿರಂತರ ಹಣ್ಣು ಹಂಪಲುಗಳನ್ನೊಳಗೊಂಡ ಪೌಷ್ಠಿಕ ಆಹಾರ ನೀಡುವ ಕಾರುಣ್ಯ ಸೇವೆಯನ್ನು ಇ ಫ್ರೆಂಡ್ಸ್ ತಂಡ ಆರಂಭಿಸಿದೆ.
ಬಳಿಕ ಮಾತನಾಡಿದ ಶಾಸಕರು, ಹಸಿದವನಿಗೆ ಅನ್ನ ಕೊಡುವುದು ಪುಣ್ಯದ ಕೆಲಸ. ಅದೇ ರೀತಿ ಅನಾರೋಗ್ಯ ಪೀಡಿತರಿಗೆ ಮಾನವೀಯತೆ ನೆಲೆಯಲ್ಲಿ ಸಹಕಾರ ನೀಡುವಂತಹ ಮಹತ್ವದ ಸೇವೆಯನ್ನು ಇ ಫ್ರೆಂಡ್ಸ್ ತಂಡ ಮಾಡಿದ್ದು, ಎಲ್ಲರಿಗೂ ಮಾದರಿಯಾಗಿದೆ. ಖಾಯಿಲೆ ಬಂದಾಗ ವೈದ್ಯರು ಚಿಕಿತ್ಸೆ ನೀಡುತ್ತಾರೆ, ದಾದಿಯರು ಆರೈಕೆ ಮಾಡುತ್ತಾರೆ. ಇದರ ಜೊತೆ ರೋಗಿಗಳು ಒಂದಷ್ಟು ಪೌಷ್ಠಿಕ ಆಹಾರ ತೆಗೆದುಕೊಂಡರೆ ರೋಗ ನಿರೋಧ ಶಕ್ತಿವೃದ್ಧಿಸಲು ಸಹಕಾರಿಯಾಗುತ್ತದೆ. ಇದನ್ನು ಮನಗಂಡು ಇ ಫ್ರೆಂಡ್ಸ್ ಸಮಾಜಮುಖಿ ಕೆಲಸ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಇ ಫ್ರೆಂಡ್ಸ್ ತಂಡದ ಅಧ್ಯಕ್ಷ ಡಾ.ಇಸ್ಮಾಯಿಲ್ ಸರ್ಫ್ರಾಝ್ ಮಾತನಾಡಿ, ಲಾಕ್‌ಡೌನ್‌ಗೂ ಮುಂಚೆಯೇ ಇ ಫ್ರೆಂಡ್ಸ್ ತಂಡ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ, ನಿರ್ಗತಿಕರನ್ನು ಹುಡುಕಿ ಅವರಿಗೆ ಕಿಟ್ ಕೊಡುವ ಕೆಲಸ ಮಾಡಿದೆ. ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಕೊರತೆ ಉಂಟಾದಾಗಲೂ ಎರಡು ಬಾರಿ ರಕ್ತದಾನ ಮಾಡಿದ್ದೇವೆ. ಮುಂದೆ ರಕ್ತದ ಕೊರತೆ ಆಗಬಾರದು. ಅದಕ್ಕಾಗಿ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಅದರ ಮೂಲಕ ರಕ್ತದಾನಕ್ಕೆ ಸಹಕಾರ ನೀಡುತ್ತಿದ್ದೇವೆ. ಸದಾ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಪೂರ್ಣ ಸಹಕಾರ ನೀಡುವ ನಮ್ಮ ತಂಡ, ಕೋವಿಡ್ ರೋಗಿಗಳಿಗೆ ನೆರವಾಗಲು ನಿರಂತರ ಹಣ್ಣುಹಂಪಲುಗಳನ್ನು ನೀಡಲು ಮುಂದಾಗಿದೆ ಎಂದರು.