ಮಿತ್ತನಡ್ಕ (ಬಂಟ್ವಾಳ): ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿ, ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಾಗಿ ಸರ್ಕಾರ ಮಾಡುತ್ತಿದೆ. ಹೀಗಿರುವಾಗ ಇಲ್ಲೊಂದು ಸರಕಾರಿ ಶಾಲೆಯನ್ನು ಉಳಿಸಲು ಹಿರಿಯ ವಿದ್ಯಾರ್ಥಿಗಳ ತಂಡವೊಂದು ಸಜ್ಜಾಗಿದೆ.
ಹೌದು, ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಚ್ಚ ಕನ್ನಡವನ್ನು ಪಾಠ ಮಾಡುವ ಶಿಕ್ಷಕ ವೃಂದಕ್ಕೆ ಸಹಕಾರಿಯಾಗಲು ಮತ್ತು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಈ ತಂಡ ಮೊದಲ ಹೆಜ್ಜೆಯಾಗಿ ಮಕ್ಕಳ ಪಾರ್ಕ್ ನಿರ್ಮಾಣ ಮಾಡಿದೆ. 84 ವರ್ಷಗಳಷ್ಟು ಹಳೆಯ ಶಾಲೆ ಇದಾಗಿದ್ದು, ಹಿರಿಯ ವಿದ್ಯಾರ್ಥಿಗಳೆಲ್ಲಾ ಒಟ್ಟಾಗಿದ್ದಾರೆ. ವಿಶ್ವದ ಬೇರೆ ಬೇರೆ ಕಡೆಯಲ್ಲಿರುವ ವಿದ್ಯಾಥಿಗಳು ಸಾಮಾಜಿಕ ಮಾಧ್ಯಮದ ಮೂಲಕ ಸೇರಿಕೊಳ್ಳುತ್ತಿದ್ದಾರೆ.