ಬೆಳ್ತಂಗಡಿ(ದಕ್ಷಿಣಕನ್ನಡ): ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ಯ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ. ಆದ್ದರಿಂದ ಡಿಕೆಶಿ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿವುದು ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ: ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅಧಿಕಾರ ಹಸ್ತಾಂತರ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೆ ಬಿಜೆಪಿ ಸರ್ಕಾರ ತಡೆಯೊಡ್ಡುತ್ತಿದೆ. ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನ ನೋಡಲು ಝೂಮ್ ಆ್ಯಪ್ ಮೂಲಕ ರಾಜ್ಯದ 7,800 ಕಡೆಗಳಲ್ಲಿ ಆನ್ಲೈನ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಸಂವಿಧಾನದ ಮುನ್ನುಡಿ ಏನಿದೆ ಅದನ್ನು ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಅಧ್ಯಕ್ಷರು ಭೋದಿಸುವಂತಹ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು.
ಲಾಕ್ಡೌನ್ ಸಡಿಲಿಕೆ ಇದ್ದರಿಂದ ದೇಶದಲ್ಲಿ ಎಲ್ಲೂ ಆಗಿರದಂತಹ ಒಂದು ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲು ಕಾನೂನಾತ್ಮಕವಾಗಿ ಜೂನ್ 7ರಂದು ತಯಾರಿ ನಡೆಸಿದಾಗ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಮುಂದಿನ 14ನೇ ತಾರೀಕಿಗೆ ದಿನ ನಿಗದಿ ಪಡಿಸಲಾಗಿದ್ದರೂ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಯಾಕೆಂದರೆ ಈ ಕಾರ್ಯಕ್ರಮವನ್ನ ವಿಫಲ ಮಾಡಬೇಕು ಎನ್ನುವಂತಹ ಉದ್ದೇಶವನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಂದಿವೆ ಎಂದು ವಾಗ್ದಾಳಿ ನಡೆಸಿದರು.
ಇಂದು ಡಿ.ಕೆ.ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನ ಭೇಟಿ ಮಾಡುವ ಕಾರ್ಯಕ್ರಮ ಕೈಗೊಂಡಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದ ಅವರು ಬರುವ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದಾಗಿದೆ.