ಮಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನು ಅನುಭವಿಸಲು ಧಾರ್ಮಿಕ ಧ್ರುವೀಕರಣ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.
ಧಾರ್ಮಿಕ ಧ್ರುವೀಕರಣ ಜಾಸ್ತಿಯಾದದ್ದು ಕಾಂಗ್ರೆಸ್ ಸೋಲಿಗೆ ಕಾರಣ: ಐವನ್ ಡಿಸೋಜ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನನುಭವಿಸಿತು. ಈ ಸೋಲಿಗೆ ಬಿಜೆಪಿ ಚುನಾವಣಾ ಪ್ರಚಾರದ ವೇಳೆಗೆ ಧಾರ್ಮಿಕತೆಗೆ ಹೆಚ್ಚಿನ ಒತ್ತು ಕೊಟ್ಟಿರುವುದು ಪ್ರಮುಖ ಕಾರಣವಾಗಿದೆ ಎಂದು ಐವನ್ ಡಿಸೋಜಾ ಕಿಡಿಕಾರಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರದ ವೇಳೆ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಕೇಳಿಬಂದಿತ್ತು. ಆದರೆ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿ ಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಧಾರ್ಮಿಕ ಧ್ರುವೀಕರಣ ಜಾಸ್ತಿಯಾಯಿತು. ಬಿಜೆಪಿಯ ಅಬ್ಬರದ ಪ್ರಚಾರ, ಅಧಿಕಾರ ಇದ್ದದ್ದು, ರಾಷ್ಟ್ರೀಯ ಮಾಧ್ಯಮಗಳ ಸಹಾಯ ಅವರಿಗೆ ಅನುಕೂಲಕರವಾಯಿತು ಎಂದರು.
ಚುನಾವಣಾ ಸಂದರ್ಭದಲ್ಲಿ ನಡೆದ ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್ ಪ್ರಚಾರ ಬಿಜೆಪಿಗೆ ನೆರವಾಯಿತು. ಮೋದಿ ತನ್ನ ಪ್ರಚಾರ ಭಾಷಣದಲ್ಲಿ ಅಚ್ಚೇ ದಿನ್, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬಗ್ಗೆ ಮಾತನಾಡಲಿಲ್ಲ. ಆದರೂ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಎಲ್ಲವನ್ನೂ ತಾನೇ ಮಾಡುತ್ತಿದ್ದೇನೆ ಎಂಬಂತೆ ಮೋದಿ ಬಿಂಬಿಸಿ ವಿಜಯಿಯಾದರು ಎಂದರು.