ಪುತ್ತೂರು(ದಕ್ಷಿಣ ಕನ್ನಡ) : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಜಾತ್ಯತೀತ ಜನತಾ ದಳ, ಆಮ್ ಆದ್ಮಿ ಪಕ್ಷದ ನಾಯಕರು ಮತ್ತು ಮುಖಂಡರು ಚುನಾವಣೆ ಮೇಲೆ ಕಣ್ಣಿಟ್ಟು ವಿವಿಧ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾಗಿರುವ ಬಿಜೆಪಿ ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿದ್ದಾರೆ. ಹಳೆ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕ ಹುಬ್ಬಳ್ಳಿ, ಬೆಳಗಾವಿಯಲ್ಲಿ ಕಳೆದ ವಾರವಷ್ಟೇ ಮಿಂಚಿನ ಸಂಚಾರ ನಡೆಸಿದ್ದರು. ಇದೀಗ ಕರಾವಳಿ ಭಾಗಕ್ಕೆ ಅವರು ಭೇಟಿ ನೀಡುತ್ತಿದ್ದಾರೆ.
ಹೌದು, ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಆಗಮಿಸುವ ಹಿನ್ನೆಲೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಶಾಸಕ ಸಂಜೀವ ಮಠಂದೂರು ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಆಗಮಿಸಲಿದ್ದಾರೆ. ಬಜ್ಪೆಯಿಂದ ಹೆಲಿಕಾಫ್ಟರ್‌ನಲ್ಲಿ ಬರಲಿದ್ದು, ಹನುಮಗಿರಿಗೆ ಹೋಗುವ ಸಾಧ್ಯತೆ ಇರುವುದರಿಂದ ಕಾವು ಸಮೀಪವು ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ವ್ಯವಸ್ಥೆ ಮಾಡಬೇಕು. ಕಾನೂನು ಸುವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಂಚಾರದಲ್ಲಿ ತೊಂದರೆ ಆಗದಂತೆ, ಸ್ವಚ್ಛತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ತಾಲೂಕು ಆಡಳಿತ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಪುತ್ತೂರಿಗೆ ಅಮಿತ್ ಶಾ ಭೇಟಿ :ಈ ವೇಳೆ ಡಿವೈಎಸ್ಪಿ ವೀರಯ್ಯ ಹಿರೇಮಠ್ ಕಾನೂನು ಸುವ್ಯವಸ್ಥೆ ಮತ್ತು ಸಂಚಾರದ ಬಗ್ಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಲಿನ್ಸೆ ಕ್ವಾಲ್ವಿನ್ ಸ್ವೀಕೆರಾ ರಸ್ತೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಕ್ಯಾಂಪ್ಕೋದ ಸೀನಿಯರ್ ಮ್ಯಾನೇಜರ್ ಪ್ರೇಮ್ ಜಿ ಅವರು ವೇದಿಕೆಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು.