ಕರ್ನಾಟಕ

karnataka

ETV Bharat / state

ಕ್ಯಾಂಪ್ಕೋವನ್ನೂ ಗುಜರಾತಿ ಬಂಡವಾಳಶಾಹಿಗಳೊಂದಿಗೆ ಮರ್ಜ್‌ ಮಾಡದಿದ್ದರೆ ಸಾಕು: ವಿಶ್ವನಾಥ ರೈ

ಕ್ಯಾಂಪ್ಕೋ ಸುವರ್ಣ ಸಂಭ್ರಮಕ್ಕೆ ಪುತ್ತೂರಿಗೆ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.

Press conference by Puttur Block Congress leaders
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿ

By

Published : Feb 7, 2023, 6:20 PM IST

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿ

ಪುತ್ತೂರು: "ಕೇಂದ್ರ ಸಚಿವ ಅಮಿತ್ ಶಾ ಅವರು ಪುತ್ತೂರು ಕ್ಯಾಂಪ್ಕೋ ಸಂಸ್ಥೆಯನ್ನೂ ಗುಜರಾತಿನ ಬಂಡವಾಳ ಶಾಹಿಗಳೊಂದಿಗೆ ಮರ್ಜ್ ಮಾಡದಿದ್ದರೆ ಸಾಕು" ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಟೀಕಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,​ "ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ನೀಡಿದ್ದಾಗ ಕೆಎಂಎಫ್ ಅನ್ನು ಅಮೂಲ್‌ನೊಂದಿಗೆ ಮರ್ಜ್ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಫೆ 11ಕ್ಕೆ ಶಾ ಅವರು ಪುತ್ತೂರಿಗೆ ಆಗಮಿಸುತ್ತಿದ್ದು ಈ ವೇಳೆ ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಕ್ಯಾಂಪ್ಕೋವನ್ನು ಗುಜರಾತಿನ ಅಡಿಕೆ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡದಿದ್ದರೆ ಸಾಕು. ಕ್ಯಾಂಪ್ಕೊ ಈ ಭಾಗದ ಅಡಿಕೆ ಬೆಳೆಗಾರರ ಜೀವನಾಡಿ" ಎಂದರು.

"ಪುತ್ತೂರು ಕ್ಯಾಂಪ್ಕೋವನ್ನು ಗುಜರಾತಿನ ಅಡಿಕೆ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡಿದರೆ ಮತ್ತೆ ಅಡಿಕೆ ಬೆಳೆಗಾರರು ಬದುಕುವ ಸ್ಥಿತಿ ಇರಲಿಕ್ಕಿಲ್ಲ. ಹಾಗಾಗಿ ಕ್ಯಾಂಪ್ಕೋವನ್ನು ಗುಜರಾತಿನ ಅಡಿಕೆ ಬಂಡವಾಳ ಶಾಹಿಗಳಿಗೆ ಮರ್ಜ್ ಮಾಡಬಾರದೆಂದು ನಾವು ಒತ್ತಾಯಿಸುತ್ತೇವೆ. ಕೊಳೆ ರೋಗ, ಎಲೆಚುಕ್ಕಿ ರೋಗದ ತೊಂದರೆಯಲ್ಲಿರುವ ಅಡಿಕೆ ಬೆಳೆಗಾರರಿಗೆ ವ್ಯವಸ್ಥಿತ ಪರಿಹಾರ, ಘೋಷಣೆ ಮಾಡಿರುವ ಕುಮ್ಕಿ ಹಕ್ಕು ಕೊಡಿಸಬೇಕು. ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಿ" ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಮಾತನಾಡಿ, "ಆರ್‌ಎಸ್‌ಎಸ್‌ನ ಮೂಲ ನೆಲದಲ್ಲಿ ಅಮಿತ್ ಶಾ ಅವರಿಗೆ ವಿಪರೀತ ಭದ್ರತೆಯ ಅಗತ್ಯವಿಲ್ಲ. ಈಗಾಗಲೇ ಸುಮಾರು ಮೂರುವರೆ ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇಲ್ಲಿ ಭದ್ರತೆ ಸಂಘ ಪರಿವಾರದ್ದೇ ಸಾಕು. ಅವರಿದ್ದರೆ ಈ ಜಿಲ್ಲೆಗೆ ಟೆರರಿಸ್ಟ್ ಬರುವುದಿಲ್ಲ. ಅಂತಹ ಜಿಲ್ಲೆಯಲ್ಲಿ ಮೂರುವರೆ ಸಾವಿರ ಪೊಲೀಸರನ್ನು ನಿಯೋಜನೆ ಮಾಡುವುದು ಸಂಘ ಪರಿವಾರಕ್ಕೆ ಮಾಡುವ ಅವಮಾನ" ಎಂದು ವ್ಯಂಗ್ಯವಾಡಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರೋಶನ್ ರೈ, ನಗರ ಕಾಂಗ್ರೆಸ್‌ನ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ನಗರಸಭೆ ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ ಇದ್ದರು.

ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಶಾಸಕ ಸಂಜೀವ ಮಠಂದೂರು ಸಭೆ ನಡೆಸಿದರು. ಶಾಸಕ ಮಠಂದೂರು ಮಾತನಾಡಿ, "ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಅಮಿತ್ ಶಾ, ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಆಗಮಿಸಲಿದ್ದಾರೆ. ಬಜ್ಪೆಯಿಂದ ಹೆಲಿಕಾಪ್ಟರ್‌ನಲ್ಲಿ ಬರಲಿದ್ದು, ಹನುಮಗಿರಿಗೆ ಹೋಗುವ ಸಾಧ್ಯತೆ ಇದೆ. ಕಾವು ಸಮೀಪ ಹೆಲಿಕಾಪ್ಟರ್​​ ಲ್ಯಾಂಡಿಂಗ್​ಗೆ ವ್ಯವಸ್ಥೆ ಮಾಡಬೇಕು. ಕಾನೂನು ಸುವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಂಚಾರದಲ್ಲಿ ತೊಂದರೆ ಆಗದಂತೆ, ಸ್ವಚ್ಛತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ತಾಲೂಕು ಆಡಳಿತ ವ್ಯವಸ್ಥೆ ಮಾಡಬೇಕು" ಎಂದರು.

ಇದನ್ನೂಓದಿ:ಕುಮಾರಸ್ವಾಮಿ ಹೇಳಿಕೆಗೆ ಖಂಡನೆ: ಕ್ಷಮೆಯಾಚನೆಗೆ ಸಚಿವ ಅಶ್ವತ್ಥ ನಾರಾಯಣ್ ಆಗ್ರಹ

ABOUT THE AUTHOR

...view details