ಮಂಗಳೂರು: ನಗರದ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೊಬ್ಬ ಹಾಡಹಗಲಿನಲ್ಲಿಯೇ ಆಭರಣದೊಂದಿಗೆ ಪರಾರಿಯಾಗಲೆತ್ನಿಸಿದಾಗ, ಜ್ಯುವೆಲ್ಲರಿ ಶಾಪ್ ಮಾಲೀಕರೇ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ಅರುಣ್ ಜಿ. ಶೇಟ್ ಅವರ ಒಡೆತನದ ನಗರದ ರಥಬೀದಿಯಲ್ಲಿರುವ ಅರುಣ್ ಜಿ. ಶೇಟ್ ಜ್ಯುವೆಲ್ಲರಿ ಅಂಡ್ ಡೈಮಂಡ್ ವರ್ಕ್ಸ್ ಶಾಪ್ಗೆ ನಿನ್ನೆ ಮಧ್ಯಾಹ 2 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಈ ಖದೀಮ, ಆಭರಣವನ್ನು ಕೊಳ್ಳಲು ನೋಡುವವನಂತೆ ನಟಿಸಿದ್ದಾನೆ. ಮಾಲಕ ಅರುಣ್ ಜಿ.ಶೇಟ್ ಅವರೇ ಆತನಿಗೆ ಆಭರಣ ತೋರಿಸುತ್ತಿರುವಾಗಲೇ ಆತ ಏಕಾಏಕಿ ಆಭರಣದೊಂದಿಗೆ ಓಡಿದ್ದಾನೆ.
ಗ್ರಾಹಕರ ಸೋಗಿನಲ್ಲಿ ಕನ್ನ ಹಾಕಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ ಆತ ಓಡುತ್ತಿರುವುದನ್ನು ಗಮನಿಸಿದ ಜ್ಯುವೆಲ್ಲರಿ ಶಾಪ್ ಮಾಲೀಕ ಅರುಣ್ ಜಿ ಶೇಟ್ ಅವರು ಅವನನ್ನು ಬೆನ್ನಟಿದ್ದಾರೆ. ಸ್ವಲ್ಪ ದೂರ ಹೋಗುತ್ತಲೇ ಆತ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟರಲ್ಲಾಗಲೇ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿದಿದ್ದು, ಈ ಸಂದರ್ಭ ಅಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಈ ಎಲ್ಲ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಓದಿ : ಮದುವೆಗೊಪ್ಪದ ಯುವಕ.. ಶೌಚಾಲಯದಲ್ಲಿ ನೇಣಿಗೆ ಶರಣಾದ ಸಾಫ್ಟ್ವೇರ್ ಇಂಜಿನಿಯರ್!
ಬಳಿಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಬಂದರ್ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಮಾದರಿಯಲ್ಲಿ ಅನೇಕ ಕಡೆಗಳಲ್ಲಿ ಕಳ್ಳತನ ನಡೆದಿದ್ದು, ಅದರಲ್ಲೂ ಇವನದೇ ಕೈಚಳಕ ಇರಬಹುದು ಎಂದು ಅರುಣ್ ಜಿ.ಶೇಟ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.