ಸುಳ್ಯ (ದಕ್ಷಿಣ ಕನ್ನಡ) : ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಸುಳ್ಯ ತಾಲೂಕಿನ ಹಲವೆಡೆ ಮಾಹಿತಿಗಳನ್ನು ಪಡೆಯುತ್ತಿದೆ ಎಂದು ತಿಳಿದು ಬಂದಿದೆ.
ಎನ್ಐಎ ಅಧಿಕಾರಿಗಳ ತಂಡವು ಶನಿವಾರ ಮಂಗಳೂರಿಗೆ ಆಗಮಿಸಿ, ಭಾನುವಾರ ಮತ್ತು ಸೋಮವಾರದಂದು ಪುತ್ತೂರು, ಬೆಳ್ಳಾರೆ ಮತ್ತಿತರ ಕಡೆಗಳಿಗೆ ತೆರಳಿ ಪ್ರವೀಣ್ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ. ಆದರೆ, ಪೊಲೀಸ್ ಮೂಲಗಳು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿವೆ.
ಪ್ರವೀಣ್ ಹತ್ಯೆಯಲ್ಲಿ ಕೇರಳದ ಸಂಪರ್ಕ ಇರುವ ಸಾಧ್ಯತೆ ಇದೆ ಎನ್ನುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಪ್ರಕರಣವನ್ನು ಎನ್‌ಐಎ ತನಿಖೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿಫಾರಸು ಮಾಡಿದ ಎರಡೇ ದಿನದಲ್ಲಿ ತನಿಖಾ ತಂಡ ಆಗಮಿಸಿ, ಪ್ರಾಥಮಿಕ ತನಿಖೆ ಆರಂಭ ಮಾಡಿದೆ ಎನ್ನಲಾಗಿದೆ.
ಎನ್ಐಎ ತನಿಖಾ ತಂಡವು ಪ್ರವೀಣ್ ಹತ್ಯೆಯಾದ ಸ್ಥಳ, ಅಂಗಡಿ ಬಳಿಯಲ್ಲಿ, ಮತ್ತು ಪೊಲೀಸ್ ಠಾಣೆಗಳಿಂದ ಕೆಲವು ಮಾಹಿತಿಗಳನ್ನು ಪಡೆದಿದೆ ಎಂದು ಹೇಳಲಾಗಿದ್ದು, ಪೊಲೀಸ್ ಹಾಗೂ ಇತರ ಅಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮುಂದೆ ಈ ಎನ್‌ಐಎ ತಂಡವು ಪ್ರವೀಣ್ ಅವರ ಅಂಗಡಿ ವ್ಯವಹಾರಗಳು, ಸ್ನೇಹಿತರ ಸಂಪರ್ಕ, ಸ್ಥಳೀಯ ಹಿಂದೂ ಮುಸ್ಲಿಂ ಹಾಗೂ ಇತರ ಸಂಘಟನೆಗಳು, ಹಾಗೂ ಪ್ರವೀಣ್ ಅವರ ಕುಟುಂಬದ ಜತೆ ಮಾತನಾಡಿ ವಿವರವಾದ ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಹೇಳಲಾಗಿದೆ.
ಅಲ್ಲದೇ ಈಗಾಗಲೇ ತನಿಖೆ ಕೈಗೊಂಡ ಇಲ್ಲಿನ ಪೊಲೀಸ್ ತನಿಖಾ ತಂಡದ ಜತೆಯೂ ಮಾಹಿತಿ ಪಡೆದು ಈಗಾಗಲೇ ಬಂಧಿತರಾಗಿರುವ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಲಿದೆ ಎಂದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ ಎನ್ಐಎಯು ಪ್ರಾಥಮಿಕವಾಗಿ ಲಭ್ಯವಾಗುವ ಎಲ್ಲ ಮಾಹಿತಿಗಳ ಸಂಗ್ರಹ ಪ್ರಕ್ರಿಯೆ ಮುಕ್ತಾಯಗೊಳಿಸಿದ ಬಳಿಕವೇ ಮುಂದಿನ ಹಂತದ ತನಿಖೆಗೆ ಮುಂದಾಗಲಿದೆ. ಸಾಮಾನ್ಯವಾಗಿ ದೇಶದ ಆಂತರಿಕ ಭದ್ರತೆ, ಸಾಮಾಜಿಕ ಹಿತಾಸಕ್ತಿಗಳಿಗೆ ಧಕ್ಕೆ ತರುವ ಹಾಗೂ ಕೆಲವು ಪತ್ತೆಯಾಗದ ಪ್ರಕರಣಗಳು, ಭಯೋತ್ಪಾದಕ ಸಂಘಟನೆಗಳು ಮತ್ತು ಇತರ ಸಂಘಟನೆಗಳು ಒಳಗೊಂಡ ಪ್ರಕರಣಗಳು ಮತ್ತು ಉಗ್ರಗಾಮಿ ಕೃತ್ಯಗಳನ್ನು ತನಿಖೆ ನಡೆಸಲು ಎನ್‌ಐಎ ಬಳಕೆಯಾಗುತ್ತದೆ.
ಎನ್ಐಎ ಕಾಯ್ದೆಯಲ್ಲಿ ತಿಳಿಸಿರುವಂತೆ ಈ ಸಂಸ್ಥೆಗೆ ಭಯೋತ್ಪಾದಕ ಕೃತ್ಯ ಸಂಬಂಧಿ ತನಿಖೆಗಳನ್ನು ದೇಶದ ಯಾವುದೇ ಮೂಲೆಯಲ್ಲಿ ಕೈಗೊಳ್ಳಲು ಸರ್ವಾಧಿಕಾರ ಇರುತ್ತದೆ. ಅಲ್ಲದೇ ಅಂತಹ ಕೃತ್ಯಗಳಲ್ಲಿ ಶಾಮೀಲಾಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಎನ್ಐಎ ಕಾಯ್ದೆಯಲ್ಲಿ ನಮೂದಾಗಿರುವ ಯಾವುದೇ ಕೃತ್ಯಗಳು, ಆಯಾ ರಾಜ್ಯ ಸರ್ಕಾರದಲ್ಲಿ ದಾಖಲಾದ ಕೆಲವು ದೂರುಗಳನ್ನು ಎನ್ಐಎಗೆ ವರ್ಗಾಯಿಸುವಂತೆ ಆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಕೋರಿಕೊಳ್ಳಬಹುದು.
ಓದಿ :ಸುಬ್ರಮಣ್ಯದಲ್ಲಿ ಭಾರಿ ಮಳೆ: ಮನೆ ಮೇಲೆ ಕುಸಿದ ಗುಡ್ಡ, ಮಣ್ಣಿನಡಿ ಸಿಲುಕಿದ ಮಕ್ಕಳು