ಉಳ್ಳಾಲ (ದಕ್ಷಿಣ ಕನ್ನಡ): ಸೋಮೇಶ್ವರ ಪುರಸಭೆಯ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 16 ಸ್ಥಾನಗಳಲ್ಲಿ ಗೆದ್ದು ಬೀಗಿದ್ದು, ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ 30 ವರ್ಷಗಳಿಂದ ಸೋಮೇಶ್ವರ ಬಿಜೆಪಿ ತೆಕ್ಕೆಯಲ್ಲಿದ್ದು, ಇದೀಗ ಮತ್ತೆ ನೂತನ ಸೋಮೇಶ್ವರ ಪುರಸಭೆಯಲ್ಲೂ ಬಿಜೆಪಿ ಬಹುಮತ ಪಡೆದು ಆಡಳಿತ ನಡೆಸಲು ಮುಂದಾಗಿದೆ. ಕಳೆದ ಡಿಸೆಂಬರ್ 27ರಂದು ಸೋಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ ಚುನಾವಣೆ ನಡೆದಿತ್ತು.
ವಾರ್ಡ್ ಸಂಖ್ಯೆ 1ರಲ್ಲಿ ಕಾಂಗ್ರೆಸ್ನ ಹಾಮೀನ ಬಶೀರ್, ವಾರ್ಡ್ ಸಂಖ್ಯೆ 2 ರಲ್ಲಿ ಬಿಜೆಪಿ ಅಭ್ಯರ್ಥಿ ಯಶವಂತ್, ವಾರ್ಡ್ ಸಂಖ್ಯೆ 3ರಲ್ಲಿ ಬಿಜೆಪಿ ಸ್ವಪ್ನ ಶೆಟ್ಟಿ, ವಾರ್ಡ್ ಸಂಖ್ಯೆ 4 ರಲ್ಲಿ ಕಾಂಗ್ರೆಸ್ನ ಪುರುಷೋತ್ತಮ್ ಶೆಟ್ಟಿ, ವಾರ್ಡ್ ಸಂಖ್ಯೆ 5 ರಲ್ಲಿ ಬಿಜೆಪಿಯ ಜಯ ಪೂಜಾರಿ, ವಾರ್ಡ್ ಸಂಖ್ಯೆ 6ರಲ್ಲಿ ಬಿಜೆಪಿಯ ಮಾಲತಿ ನಾಯ್ಕ್, ವಾರ್ಡ್ ಸಂಖ್ಯೆ 7ರಲ್ಲಿ ಬಿಜೆಪಿಯ ಕಮಲಾ ನಾಯಕ್, ವಾರ್ಡ್ ಸಂಖ್ಯೆ 8ರಲ್ಲಿ ಬಿಜೆಪಿಯ ಮೋಹನ್ ಶೆಟ್ಟಿ, ವಾರ್ಡ್ ಸಂಖ್ಯೆ 9ರಲ್ಲಿ ಕಾಂಗ್ರೆಸ್ನ ಪರ್ವಿನ್ ಶಾಜಿದ್, ವಾರ್ಡ್ ಸಂಖ್ಯೆ 10ರಲ್ಲಿ ಬಿಜೆಪಿಯ ಮನೋಜ್ ಕಟ್ಟೆಮನೆ, ವಾರ್ಡ್ ಸಂಖ್ಯೆ 11ರಲ್ಲಿ ಬಿಜೆಪಿಯ ಹರೀಶ್ ಕುಂಪಲ, ವಾರ್ಡ್ ಸಂಖ್ಯೆ 12ರಲ್ಲಿ ಬಿಜೆಪಿಯ ಅನಿಲ್ ಕೊಲ್ಯ ಗೆಲುವು ಸಾಧಿಸಿದ್ದಾರೆ.
ವಾರ್ಡ್ ಸಂಖ್ಯೆ 13ರಲ್ಲಿ ಕಾಂಗ್ರೆಸ್ನ ದೀಪಕ್ ಪಿಲಾರ್, ವಾರ್ಡ್ ಸಂಖ್ಯೆ 14ರಲ್ಲಿ ಬಿಜೆಪಿಯ ಅಮಿತಾ, ವಾರ್ಡ್ ಸಂಖ್ಯೆ 15ರಲ್ಲಿ ಬಿಜೆಪಿಯ ಸೋನಾ ಶುಭಾಷಿನಿ, ವಾರ್ಡ್ ಸಂಖ್ಯೆ 16ರಲ್ಲಿ ಬಿಜೆಪಿಯ ಅನಿಲ್, ವಾರ್ಡ್ ಸಂಖ್ಯೆ 17 ರಲ್ಲಿ ಬಿಜೆಪಿಯ ಪುರುಷೋತ್ತಮ್ ಗಟ್ಟಿ, ವಾರ್ಡ್ ಸಂಖ್ಯೆ 18ರಲ್ಲಿ ಕಾಂಗ್ರೆಸ್ನ ತಾಹೀರಾ, ವಾರ್ಡ್ ಸಂಖ್ಯೆ 19ರಲ್ಲಿ ಬಿಜೆಪಿಯ ಶ್ರೀಲತಾ ದಿನೇಶ್ ಗಟ್ಟಿ, ವಾರ್ಡ್ ಸಂಖ್ಯೆ 20ರಲ್ಲಿ ಕಾಂಗ್ರೆಸ್ನ ಅಬ್ದುಲ್ ಸಲಾಂ, ವಾರ್ಡ್ ಸಂಖ್ಯೆ 21ರಲ್ಲಿ ಕಾಂಗ್ರೆಸ್ನ ರಮ್ಲತ್, ವಾರ್ಡ್ ಸಂಖ್ಯೆ 22ರಲ್ಲಿ ಕಾಂಗ್ರೆಸ್ನ ತಾಹಿರಾ, ವಾರ್ಡ್ ಸಂಖ್ಯೆ 23ರಲ್ಲಿ ಬಿಜೆಪಿಯ ಜಯಶ್ರೀ ಗೆಲುವು ಸಾಧಿಸಿದ್ದಾರೆ.
ವಾರ್ಡ್ ಸಂಖ್ಯೆ 13ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶ್ ಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಪಿಲಾರ್ ತಲಾ 247 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಬಳಿಕ ಚೀಟಿ ಎತ್ತುವ ಮೂಲಕ ಕೈ ಅಭ್ಯರ್ಥಿ ಗೆಲುವು ಸಾಧಿಸಿದರು. ಸ್ಪೀಕರ್ ಯು ಟಿ ಖಾದರ್ ಪ್ರತಿನಿಧಿಸುವ ಉಳ್ಳಾಲ ಕ್ಷೇತ್ರದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ.
ಚಡಚಣ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿನ 16 ಸ್ಥಾನಗಳ ಹಾಗೂ ಮುದ್ದೇಬಿಹಾಳ ಪಟ್ಟಣದ ಪುರಸಭೆಯ ವಾರ್ಡ್ ನಂಬರ್ 18 ಹಾಗೂ ಬಸವಸನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿಯ ವಾರ್ಡ್ ನಂಬರ್ 7ರ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
ಚಡಚಣ ಪಟ್ಟಣದ ಪಟ್ಟಣ ಪಂಚಾಯತಿಯ 16 ವಾರ್ಡ್ಗಳ ಪೈಕಿ 8 ಸ್ಥಾನಗಳಲ್ಲಿ ಬಿಜೆಪಿ, 4 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಇತರ 4 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದು ಬೀಗಿದ್ದಾರೆ. ಚಡಚಣ ಪಟ್ಟಣ ಪಂಚಾಯತಿಯ ವಾರ್ಡ್ ನಂಬರ್ 1, 2, 7, 8, 9, 10, 13, 15ನೇ ವಾರ್ಡ್ಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ವಾರ್ಡ್ ಸಂಖ್ಯೆ 5, 12, 14 ಹಾಗೂ 16ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ವಾರ್ಡ್ ನಂಬರ್ 3, 4, 6 ಹಾಗೂ 11ನೇ ವಾರ್ಡ್ನಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಪುರಸಭೆಯ ವಾರ್ಡ್ ಸಂಖ್ಯೆ 18ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ, ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿಯ 7ನೇ ವಾರ್ಡ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ರಾಯಚೂರು ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು :ರಾಯಚೂರು ಜಿಲ್ಲೆಯಎರಡು ನಗರಸಭೆ ಮತ್ತು ಎರಡು ಪುರಸಭೆ ಸೇರಿ ನಾಲ್ಕು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ನಾಲ್ಕು ಸ್ಥಾನಗಳಲ್ಲಿ ಮೂರು ಕಡೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ, ಒಂದು ಕಡೆ ಅವಿರೋಧ ಆಯ್ಕೆವಾಗಿದೆ. ರಾಯಚೂರು ನಗರಸಭೆಯ 12ನೇ ವಾರ್ಡ್, ಸಿಂಧನೂರಿನ 22ನೇ ವಾರ್ಡ್, ದೇವದುರ್ಗದ ಪುರಸಭೆಯ 5ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಲಿಂಗಸೂಗೂರು 19ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಯಚೂರು ನಗರಸಭೆಯ 12ನೇ ವಾರ್ಡ್ ವಿನಯಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿತ್ತು. ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪವನ್ ಕುಮಾರ್ ಎಂ. ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪವನ್ 2627 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ರಹಿಂ ಖಾನ್ 359 ಮತ ಹಾಗೂ ಪಕ್ಷೇತರ ಅಭ್ಯರ್ಥಿ ನೂರ್ ಪಾಷಾ 140 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್ಗೆ ಪರೋಕ್ಷ ಬೆಂಬಲ ನೀಡಿತ್ತು. 18 ನೋಟಾ ಮತಗಳು ಚಲಾವಣೆಯಾಗಿವೆ.
ಸಿಂಧನೂರು ನಗರಸಭೆಯ 22ನೇ ವಾರ್ಡ್ ಸದಸ್ಯ ಮುನೀರ ಪಾಷಾ ನಿಧನದಿಂದ ತೆರವಾಗಿತ್ತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಬೇದಾಬೇಗಂ ಗೆಲುವು ಸಾಧಿಸಿದ್ದಾರೆ. ಮುನೀರ ಪಾಷಾ ಪತ್ನಿ ಅಬೇದಾಬೇಗಂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಬಿಜೆಪಿಯಿಂದ ಮಲ್ಲಿಕಾರ್ಜುನ ಕಾಟಗಲ್, ಜೆಡಿಎಸ್‌ನಿಂದ ಎಂ.ಮಹಿಬೂಬ, ಎಸ್‌ಡಿಪಿಐನಿಂದ ಅಬ್ದುಲ್ ರಿಯಾಜ್ ಬುಡ್ಡಣ್ಣಿ ಸ್ಪರ್ಧೆ ಮಾಡಿದ್ದರು. ಒಟ್ಟು 1150 ಮತಗಳ ಪೈಕಿ, ಅಬೇದಾಬೇಗಂ 744, ಮಲ್ಲಿಕಾರ್ಜುನ ಕಾಟಗಲ್ 105, ಎಂ.ಮಹಿಬೂಬ ಅವರಿಗೆ 266, ಅಬ್ದುಲ್ ರಿಯಾಜ್ ಬುಡ್ಡಣ್ಣಿ ಅವರು 29 ಮತಗಳನ್ನು ಪಡೆದರೆ, 6 ಮತಗಳು ನೋಟಾಕ್ಕೆ ಬಿದ್ದಿವೆ. ಕಾಂಗ್ರೆಸ್ ಅಭ್ಯರ್ಥಿ 478 ಮತಗಳ ಅಂತರದಿಂದ ಗೆದ್ದಿದ್ದಾರೆ.
ದೇವದುರ್ಗ ಪುರಸಭೆಯ 5ನೇ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕೋಬ 387 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರಭು 262 ಮತ, ಬಿಜೆಪಿಯ ಸಂಜೀವ 133 ಮತ ಪಡೆದುಕೊಂಡಿದ್ದಾರೆ. ಲಿಂಗಸೂಗೂರು ಪುರಸಭೆಯ 19ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಮ್ಮ ಅಮರಪ್ಪ ಕೊಡ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಕುಪ್ಪಮ್ಮ ಕೊಡ್ಲಿ ಅವರು ಮೃತಪಟ್ಟಿದ್ದರಿಂದ ಈ ಸ್ಥಾನ ತೆರವಾಗಿತ್ತು. ಒಟ್ಟು ಐವರು ಉಮೇದುವಾರಿಕೆ ಸಲ್ಲಿಸಿದ್ದರು. ನಾಲ್ವರು ನಾಮಪತ್ರ ಹಿಂಪಡೆದ ಕಾರಣಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಇದನ್ನೂ ಓದಿ :ಹೊಸ ವರ್ಷಾಚರಣೆ; ಎಂಜಿ ರೋಡ್, ಬ್ರಿಗೇಡ್ ರೋಡ್ಗೆ ಆಗಮಿಸುವವರಿಗೆ ಪೊಲೀಸರ ಸೂಚನೆ