ಮಂಗಳೂರು :ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪರವಾನಿಗೆ ಇಲ್ಲದೆ ದೊಂದಿ ಮೆರವಣಿಗೆ ನಡೆಸಲು ಯತ್ನಿಸಿದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸಹಿತ ಹಲವರನ್ನು ಬಂಧಿಸಿರುವ ಘಟನೆ ನಡೆಯಿತು.
ಪರವಾನಿಗೆ ಇಲ್ಲದೆ ಮೆರವಣಿಗೆ ನಡೆಸಲು ಯತ್ನ.. ಕಾರ್ಯಕರ್ತರು ಪೊಲೀಸರ ವಶಕ್ಕೆ ನಗರದ ಮಿನಿ ವಿಧಾನಸೌಧದ ಮುಂಭಾಗ ಯುವ ಕಾಂಗ್ರೆಸ್ ದ ಕ ಜಿಲ್ಲಾ ಸಮಿತಿಯ ವತಿಯಿಂದ ಸಂಜೆ 6.30ಕ್ಕೆ ದೊಂದಿ ಬೆಳಕಿನ ಮೆರವಣಿಗೆ ನಡೆಸಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಅದಕ್ಕೆ ಅವಕಾಶ ನೀಡದೆ ಪ್ರತಿಭಟನಾ ನಿರತರನ್ನು ಬಂಧಿಸಿದ್ದಾರೆ.
ಪ್ರತಿಭಟನಾಕಾರರು ನಗರದ ಕ್ಲಾಕ್ ಟವರ್ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ದೊಂದಿ ಮೆರವಣಿಗೆ ನಡೆಸಲು ಅವಕಾಶ ಕೋರಿದ್ದರು. ಅವಕಾಶ ದೊರಕದಿದ್ದ ಹಿನ್ನೆಲೆ ಕನಿಷ್ಠ ಪಕ್ಷ ಪುರಭವನದ ಮುಂಭಾಗದವರೆಗೆ ಮೆರವಣಿಗೆ ನಡೆಸಲು ಅವಕಾಶ ಕೋರಿದರು. ಆದರೆ, ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ನೀಡದಿದ್ದರಿಂದ ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ಸದಸ್ಯರಾದ ಎ ಸಿ ವಿನಯ್ ರಾಜ್ ಹಾಗೂ ಪ್ರವೀಣ್ ಚಂದ್ರ ಆಳ್ವ ಅವರು ಮೆರವಣಿಗೆ ನಡೆಸಿ ಕೊನೆಗೆ ಪೊಲೀಸರ ವಶವಾದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರನ್ನೂ ಹಿಮ್ಮೆಟ್ಟಿಸಿ ಮೆರವಣಿಗೆ ನಡೆಸಲು ಮುಂದಾದಾಗ ಅದನ್ನ ತಡೆಯಲಾಗಿದೆ. ಈ ವೇಳೆ ಪೊಲೀಸರು ಮೆರವಣಿಗೆಯಲ್ಲಿದ್ದವರ ನಡುವೆ ತಳ್ಳಾಟವೂ ನಡೆಯಿತು. ಕೆಲ ಯುವ ನಾಯಕರನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಪೊಲೀಸ್ ವ್ಯಾನ್ ಹಿಂಬಾಲಿಸಿ ಒಂದಷ್ಟು ದೂರ ತೆರಳಿದರು. ಕೊನೆಗೂ ಪೊಲೀಸರು ಪ್ರತಿಭಟನಾನಿರತರನ್ನು ತಡೆಯುವಲ್ಲಿ ಯಶಸ್ವಿಯಾದರು.