ಮಂಗಳೂರು: ಸ್ಟ್ರೀಟ್ ಆರ್ಟ್ (ಗೋಡೆ ಚಿತ್ರ) ಅನ್ನೋ ಕಲೆ ದೊಡ್ಡ ದೊಡ್ಡ ನಗರದಲ್ಲಿ ಮಾಮೂಲಿ. ಪ್ರವಾಸೋದ್ಯಮ, ಸ್ವಚ್ಛತೆ, ಸಾಹಿತಿಗಳನ್ನು ಪರಿಚಯಿಸುವ ಚಿತ್ರಗಳನ್ನು ಗೋಡೆಗಳಲ್ಲಿ ಬಿಡುಸುವುದು ಸಾಮಾನ್ಯ. ಆದರೆ, ಮಂಗಳೂರಿನಲ್ಲಿ 'ಪಿಕ್ಸ್ಎನ್ಸಿಲ್'ನ ಐವರು ಕಲಾವಿದರ ತಂಡವೊಂದು ಆಳೆತ್ತರದ ಗೋಡೆಯ ಮೇಲೆ ಮೀನು ಮಾರುವ ವೃದ್ಧ ಮಹಿಳೆ ಹಾಗೂ 80 ವರ್ಷದ ವೃದ್ಧನ ಬೃಹದಾಕಾರದ ಚಿತ್ರಗಳನ್ನು ಬಿಡಿಸಿದೆ. ಮಂಗಳೂರಿಗೆ ಹೊಸದಾಗಿರುವ ಈ ರಿಯಲಿಸ್ಟಿಕ್ ಪೇಂಟಿಂಗ್ಗೆ ಕುಡ್ಲದ ಜನತೆ ಫಿದಾ ಆಗಿದ್ದಾರೆ.
ಪೃಥ್ವಿರಾಜ್, ಅಜೀಶ್ ಸಜಿಪ, ಅಭಿಜಿತ್ ದೇವಾಡಿಗ, ವಿನೋದ್ ಚಿಲಿಂಬಿ ಹಾಗೂ ನಿತೇಶ್ ಕನ್ಯಾಡಿ ಎಂಬ ಪಂಚ ಕಲಾವಿದರ ತಂಡ ಈ ಚಿತ್ರಗಳನ್ನು ರಚಿಸಿರುವ ಕಲಾವಿದರು. ಈಗಾಗಲೇ ನಗರದ ಎರಡು ಕಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಮೀನು ಮಾರುವ ಮಹಿಳೆಯ ಚಿತ್ರ ಉರ್ವ ಜಂಕ್ಷನ್ ಬಳಿಯ ಬೇಕರಿಯೊಂದರ ಗೋಡೆಯ ಮೇಲೆ ಮೂಡಿದರೆ, ಒಂಟಿಯಾಗಿ ಬದುಕುತ್ತಿರುವ ವೃದ್ಧನ ಚಿತ್ರ ನಗರದ ಚಿಲಿಂಬಿಯ ಬಳಿಯ ಮನೆಯೊಂದರ ಗೋಡೆಯ ಮೇಲೆ ಬಿಡಿಸಲಾಗಿದೆ. ಮೂರು ವಾರಗಳ ಹಿಂದೆ ಚಿಲಿಂಬಿಯ ಚಂದ್ರಹಾಸ ಎಂಬ ವೃದ್ಧರ ಮನೆಯ ಖಾಲಿ ಗೋಡೆಯಲ್ಲಿ ಚಿತ್ರವೊಂದನ್ನು ಬಿಡಿಸಬಹುದೇ ಎಂದು 'ಪಿಕ್ಸ್ಎನ್ಸಿಲ್' ಕಲಾವಿದರ ತಂಡ ಕೇಳಲು ಹೋಗಿದ್ದರು. ಆ ವೃದ್ಧನನ್ನು ನೋಡಿದ ಬಳಿಕ ಅದೇ ವೃದ್ಧರ ಚಿತ್ರ ಏಕೆ ಮಾಡಬಾರದು ಎಂಬ ಐಡಿಯಾ ಕಲಾವಿದರಿಗೆ ಹೊಳೆದಿದೆ. ಇದರಿಂದ 10 ಅಡಿ ಉದ್ದ 15 ಅಡಿ ಅಗಲದ ಮನೆಯ ಗೋಡೆಯಲ್ಲಿ ಕುಟುಂಬಸ್ಥರು ಯಾರೂ ಇಲ್ಲದೇ ಒಂಟಿಯಾಗಿ ಬದುಕುತ್ತಿರುವ ವೃದ್ಧ ಚಂದ್ರಹಾಸರ ಚಿತ್ರ ಮೂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರದೊಂದಿಗೆ ಬರೆದ 'Its you Tomorrow' ಎಂಬ ಟ್ಯಾಗ್ಲೈನ್ ಎಲ್ಲರ ಗಮನ ಸೆಳೆಯುತ್ತಿದೆ. ಈಗ ಯಾರಾದರೂ ಅತ್ತ ಕಡೆ ಹೋಗುತ್ತಿದ್ದರೆ ಈ ಚಿತ್ರದೆಡೆಗೆ ನೋಡದೆ ಹೋಗುವುದಿಲ್ಲವಂತೆ.
ಕಲಾವಿದರ ಕೈಚಳಕದಿಂದ ಗೋಡೆಯಲ್ಲಿ ಅರಳಿದ ವೃದ್ಧರು ಈ ಚಿತ್ರದ ಯಶಸ್ಸಿನಿಂದ ಮತ್ತೆ ಹೊಸ ವಿಷಯವಿರಿಸಿ ರಿಯಲಿಸ್ಟಿಕ್ ಪೇಂಟಿಂಗ್ ಮಾಡಲು ತಂಡ ಸಜ್ಜಾಯಿತು. ಆಗ ಹೊಳೆದದ್ದೇ, ಮಂಗಳೂರಿನ ಮೀನು ಉದ್ಯಮ. ಈ ಹಿನ್ನೆಲೆಯಲ್ಲಿ ಪೇಂಟಿಂಗ್ ಮಾಡಲು ಮೀನು ಮಾರಾಟ ಮಾಡುತ್ತಿರುವ ಮಹಿಳೆಯ ತಲಾಶ್ ಕಾರ್ಯ ನಡೆಸಲಾಯಿತು. ಕೊನೆಗೆ ನಗರದ ಉರ್ವ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಕುಸುಮಾ ಎಂಬ ವೃದ್ಧೆ ತಂಡದ ಕಣ್ಣಿಗೆ ಬಿದ್ದಿದ್ದಾರೆ. ತಮ್ಮ ಚಿತ್ರಕ್ಕೆ ಸೂಕ್ತ ಮುಖ ಇದುವೇ ಎಂದು ತೀರ್ಮಾನಿಸಿದ ತಂಡ, ಉರ್ವದ ಬೇಕರಿಯೊಂದರ ಮಾಲೀಕರಿಂದ ತಮ್ಮ ಗೋಡೆಯಲ್ಲಿ ಅವರ ಚಿತ್ರ ಮಾಡಲು ಅನುಮತಿ ಪಡೆಯುತ್ತಾರೆ.
ಕಳೆದ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಐವರು ಕಲಾವಿದರ ಶ್ರಮದಿಂದ 30 ಅಡಿ ಉದ್ದ ಹಾಗೂ 35 ಅಡಿ ಅಗಲದ ಗೋಡೆಯಲ್ಲಿ ಜೀವಂತಿಕೆಯೇ ಮೈಯೆತ್ತಿ ನಿಂತಂತೆ ಮೀನು ಮಾರಾಟ ಮಾಡುವ ಮಹಿಳೆ ಚಿತ್ರ ತಯಾರಾಗಿಯೇ ಬಿಟ್ಟಿತು. ಬ್ರಶ್ ವರ್ಕ್ ಹಾಗೂ ಸ್ಪ್ರೇ ಪೇಂಟ್ ಮೂಲಕ ಐವರು ಕಲಾವಿದರು ಚಿತ್ರದ ವಿವಿಧ ಭಾಗಗಳನ್ನು ಬಿಡಿಸಿ ಪೂರ್ಣಗೊಳಿಸಿದ್ದಾರೆ. ಮಂಗಳೂರಿಗೆ ಪರಿಚಯವೇ ಇಲ್ಲದ ಸ್ಟ್ರೀಟ್ ಆರ್ಟ್ (ಗೋಡೆ ಚಿತ್ರ) ಅನ್ನು 'ಪಿಕ್ಸ್ಎನ್ಸಿಲ್' ತಂಡ ಹೊಸದಾಗಿ ಪರಿಚಯಿಸಿ ಜನರಲ್ಲಿ ಕುತೂಹಲ ಮೂಡಿಸಿದೆ. ಇದೀಗ ಇಲ್ಲಿ ಹೋಗುವ ಎಲ್ಲರೂ ಈ ಚಿತ್ರದತ್ತ ದೃಷ್ಟಿ ಹಾಯಿಸದೇ ಹೋಗುವುದೇ ಇಲ್ಲವಂತೆ. ಅಲ್ಲದೇ ಈ ಚಿತ್ರದೊಂದಿಗೆ ಯುವ ಸಮೂಹ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ್ದು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಚಿತ್ರಗಳು ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಈ ಚಿತ್ರ ಸಾಕಷ್ಟು ಟ್ರೋಲ್ ಆಗಿಯೂ ಪ್ರಸಿದ್ಧವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರ ಪೃಥ್ವಿರಾಜ್, ಅಜೀಶ್ ಸಜಿಪ, ಅಭಿಜಿತ್ ದೇವಾಡಿಗ, ವಿನೋದ್ ಚಿಲಿಂಬಿ ಹಾಗೂ ನಿತೇಶ್ ಕನ್ಯಾಡಿಯವರು ನಗರದ ಮಹಾಲಸಾ ಆರ್ಟ್ ಶಾಲೆಯಲ್ಲಿ ಜೊತೆಯಾಗಿ ವ್ಯಾಸಂಗ ಮಾಡಿದ್ದರು. ಇದೀಗ ಇಲ್ಲೂ ಜೊತೆಯಾಗಿ ಚಿತ್ರ ಬಿಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇವರಲ್ಲಿ ಅಭಿಜಿತ್ ದೇವಾಡಿಗ ಹಾಗೂ ಪೃಥ್ವಿರಾಜ್ ಗ್ರಾಫಿಕ್ ಡಿಸೈನರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರೆ, ಉಳಿದವರೂ ಪೇಂಟಿಂಗನ್ನೇ ಕಾಯಕವಾಗಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಕಲಾವಿದ ಪೃಥ್ವಿರಾಜ್ ಮಾತನಾಡಿ, ಐದು ಜನರ ನಮ್ಮ ತಂಡ ಈ ಚಿತ್ರವನ್ನು ಬಿಡಿಸಿದ್ದು, ಎರಡೂ ಆರ್ಟ್ಗಳನ್ನು ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ಈ ಎರಡೂ ಆರ್ಟ್ಗಳು ಸಾಕಷ್ಟು ವೈರಲ್ ಕೂಡ ಆಗಿವೆ. ಇದರಿಂದ ನಮಗೆ ಇನ್ನಷ್ಟು ಚಿತ್ರ ಬಿಡಿಸುವ ಹುಮ್ಮಸ್ಸು ಮೂಡಿದ್ದು, ಮುಂದಿನ ಶನಿವಾರ ಮತ್ತೊಂದು ಚಿತ್ರ ಬಿಡಿಸುವ ಕಾರ್ಯ ಆರಂಭಿಸುತ್ತಿದ್ದೇವೆ. ಖಾಸಗಿ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಲು ಅವಕಾಶ ನೀಡಿರುವ ಕಟ್ಟಡ ಮಾಲೀಕರಿಗೂ, ಸಹಕರಿಸಿದ ಸ್ಥಳೀಯ ಕಾರ್ಪೊರೇಟರ್ಗಳಿಗೂ ಅಭಿನಂದನೆ ತಿಳಿಸಿದರು.
ಕಲಾವಿದ ಅಜೀಶ್ ಸಜಿಪ ಮಾತನಾಡಿ, ಮಂಗಳೂರಿನಲ್ಲಿ ಮೊಗವೀರ ಸಮುದಾಯ ಹೆಚ್ಚಾಗಿರುವುದರಿಂದ ನಮಗೆ ಮೀನು ಮಾರಾಟ ಮಾಡುವ ಮಹಿಳೆಯ ಚಿತ್ರ ಬಿಡಿಸಲು ಸ್ಫೂರ್ತಿಯಾಯಿತು. ಸಣ್ಣ ಸಣ್ಣ ಪೇಂಟಿಂಗ್ ಹೆಚ್ಚಾಗಿ ನಾವು ಮಾಡುತ್ತಲೇ ಇರುತ್ತೇವೆ. ಆದರೆ, ಮೊದಲ ಬಾರಿ ನಾವು ಇಷ್ಟೊಂದು ಬೃಹತ್ ಗಾತ್ರದ ಪೇಂಟಿಂಗ್ ಮಾಡಿದ್ದು, ಜನರೂ ಈ ಬಗ್ಗೆ ಆಕರ್ಷಿತರಾಗಿದ್ದಾರೆ. ತಂಡದ ಐವರು ಚಿತ್ರದ ವಿವಿಧ ಭಾಗಗಳನ್ನು ಆರಿಸಿ ಪೇಂಟಿಂಗ್ ಮಾಡಿ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದರು.