ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಕಚೇರಿ (ಮೂಡಾ)ಯ ಆಯುಕ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮುಡಾ ಕಚೇರಿಯ ಆಯುಕ್ತರಾದ ಮನ್ಸೂರು ಆಲಿ ಅವರು ಈ ಆರೋಪ ಎದುರಿಸುತ್ತಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಈ ಬಗ್ಗೆ ಆರೋಪ ಮಾಡಿದ್ದಾರೆ. ಮಹಿಳೆ ತಾವು ಕೆಲಸ ಮಾಡುತ್ತಿರುವ ಮುಡಾ ಕಚೇರಿಯ ಆಯುಕ್ತರಾದ ಮನ್ಸೂರು ಆಲಿ ಅವರು ಲೈಂಗಿಕ, ಮಾನಸಿಕ, ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸ್ ಆಯುಕ್ತರಿಗೆ ಜನವರಿ 5 ರಂದು ದೂರು ನೀಡಿದ್ದರು. ಜನವರಿ 6 ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 4/2024, ಕಲಂ 354, 354A, ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಪ್ರಸ್ತುತ ತನಿಖಾ ಹಂತದಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ- ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್ : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಯಾದ ಆರೋಪಿಯನ್ನು ಉಳ್ಳಾಲ ಪೊಲೀಸರು ಅರೆಸ್ಟ್ (ಜನವರಿ- 2-24) ಮಾಡಿದ್ದರು. ಆರೋಪಿ ಸುಮಾರು ನಾಲ್ಕು ತಿಂಗಳ ಹಿಂದೆ ಆಣಜೂರಿನ ಗ್ರಾಮದಿಂದ ಬಾಲಕಿಯನ್ನು ಮಂಗಳೂರಿನ ಪಂಪ್ವೆಲ್ಗೆ ಬಸ್‌ನಲ್ಲಿ ಕರೆಸಿಕೊಂಡಿದ್ದ. ಬಳಿಕ ಆತನ ರಿಕ್ಷಾದಲ್ಲಿ ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದ. ಮದುವೆಯಾಗುವುದಾಗಿ ಹೇಳಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.