ಮಂಗಳೂರು:ನಗರದಲ್ಲಿ ಡೆಂಘೀ ವ್ಯಾಪಕವಾಗಿ ಹರಡಿರುವುದರಿಂದ, ಖಾಯಿಲೆ ನಿವಾರಣೆಗೆ ದ.ಕ ಜಿಲ್ಲಾಡಳಿತ ಸಮರೋಪಾದಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಡೆಂಘೀ ನಿರ್ಮೂಲನೆಗೆ ಹಾಗೂ ಲಾರ್ವ ನಾಶಕ್ಕೆ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಡಳಿತ, ಶಿಕ್ಷಣ ಸಂಸ್ಥೆಗಳು ಮೂರು ದಿನದೊಳಗೆ ತಮ್ಮ ಶಾಲಾ ವ್ಯಾಪ್ತಿಯಲ್ಲಿ ಲಾರ್ವ ನಾಶ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದೆ.
ಡೆಂಘೀ ನಿವಾರಣೆಗೆ ಕ್ರಮ: ಖಡಕ್ ಎಚ್ಚರಿಕೆ ನೀಡಿದ ಡಿಸಿ - ಡೆಂಗ್ಯೂ
ನಗರದೆಲ್ಲೆಡೆ ಡೆಂಘೀ ತೀವ್ರವಾಗಿ ಹರಡುತ್ತಿದ್ದು, ಖಾಯಿಲೆ ತಡೆಗಟ್ಟಲು ಹಾಗೂ ನಿವಾರಣೆಗೆ ದ.ಕ. ಜಿಲ್ಲಾಧಿಕಾರಿ ಕೆಲವು ಮಾರ್ಗದರ್ಶನಗಳನ್ನು ನೀಡಿದ್ದು, ಜೊತೆಗೆ ಶಿಕ್ಷಣ ಸಂಸ್ಥೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡೆಂಘೀ ನಿವಾರಣೆಗೆ ದ.ಕ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇಂದು ಮಂಗಳೂರಿನ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಮಂಗಳೂರಿನಲ್ಲಿ ಕಾಣಿಸಿಕೊಂಡ ಡೆಂಘೀ ನಿರ್ಮೂಲನೆಗೆ ಬೇಕಾದ ಕ್ರಮ ಕೈಗೊಳ್ಳುವ ಮಾಹಿತಿಯನ್ನು ನೀಡಲಾಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಡೆಂಘೀ ನಿವಾರಣೆಗೆ ಸೋಂಕು ಹರಡುವ ಸೊಳ್ಳೆ ನಿವಾರಣೆ ಕಾರ್ಯ ಮುಖ್ಯವಾಗಿ ನಡೆಯಬೇಕಾಗಿದೆ. ಅದು ಮನೆಯ, ಶಿಕ್ಷಣ ಸಂಸ್ಥೆಗಳ ಸುತ್ತಲೂ ಉತ್ಪತ್ತಿಯಾಗಿ ಮನೆಯವರನ್ನು, ವಿದ್ಯಾರ್ಥಿಗಳ ಕಚ್ಚುತ್ತಿರುತ್ತದೆ. ಇದರಿಂದ ಒಂದೇ ಮನೆಯ, ಕಚೇರಿ ಶಾಲೆಯ ಹಲವರಿಗೆ ಡೆಂಘೀ ಕಾಣಿಸಿಕೊಳ್ಳುತ್ತದೆ. ಮನೆಯ ಸುತ್ತಲೂ ಒಂದು ಚಮಚ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಸೂಚನೆ ಕೊಟ್ಟರು.
ಮೂರು ದಿನದ ಬಳಿಕ ಶಿಕ್ಷಣ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುವುದು. ಒಂದು ವೇಳೆ ಲಾರ್ವ ಪತ್ತೆಯಾದರೆ ಅಂತಹ ಶಿಕ್ಷಣ ಸಂಸ್ಥೆ ಹೆಸರನ್ನು ಬಹಿರಂಗಪಡಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆಯನ್ನೂ ನೀಡಿದರು.