ಮಂಗಳೂರು:ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದ 15 ದಿನದಲ್ಲಿ ಮತ್ತೆ ಎಂಡಿಎಂಎ ಮಾರಾಟ ಮಾಡಿ, ಮಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದಾನೆ.
ಉಪ್ಪಿನಂಗಡಿಯ ಅಬ್ದುಲ್ ಅಜೀಜ್ ಯಾನೆ ಅಜೀಜ್ ಎಂಬಾತನ ವಿರುದ್ಧ ಈ ಹಿಂದೆ ಉಪ್ಪಿನಂಗಡಿ, ವಿಟ್ಲ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಮೂರು ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಸುಮಾರು 15 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಆರೋಪಿ ಬಿಡುಗಡೆಗೊಂಡಿದ್ದ. ಬಿಡುಗಡೆ ಬಳಿಕ ಈತ ಮತ್ತೆ ಅದೇ ಮಾದಕ ವಸ್ತು ಮಾರಾಟ ದಂಧೆ ನಡೆಸಿ, ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತನ ಜೊತೆಗೆ ಸುರತ್ಕಲ್ ಕಾಟಿಪಳ್ಳದ ಅಕ್ಷಿತ್ ಕುಮಾರ್(26) ಎಂಬಾತನನ್ನು ಬಂಧಿಸಲಾಗಿದೆ. "ಡ್ರಗ್ಸ್ ಫ್ರಿ ಮಂಗಳೂರು" ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಮಾರಾಟ ಮಾಡುತ್ತಿದ್ದ ಈ ಇಬ್ಬರನ್ನು ಬಂಧಿಸಲಾಗಿದೆ.
ಮಂಗಳೂರು ನಗರದ ಕೆ. ಎಸ್ ರಾವ್ ರಸ್ತೆ ಪರಿಸರದಲ್ಲಿ ವ್ಯಕ್ತಿಗಳಿಬ್ಬರು ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ದಾಳಿ ನಡೆಸಿ ಎಂಡಿಎಂಎ ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ ಈ ಇಬ್ಬರನ್ನು ಬಂಧಿಸಿದ್ದಾರೆ.