ಕಡಬ (ದಕ್ಷಿಣ ಕನ್ನಡ) : ಚಲಿಸುತ್ತಿದ್ದ ಒಮ್ನಿ ಕಾರಿನ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ನಡೆದಿದೆ. ಅದೃಷ್ಟವಶತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಚಲಿಸುತ್ತಿದ್ದ ಒಮ್ನಿ ಮೇಲೆ ಮುರಿದು ಬಿದ್ದ ಮರ; ಚಾಲಕ ಅಪಾಯದಿಂದ ಪಾರು - fallen tree on a moving car
ಕಡಬ ಸಮೀಪ ಭಾರಿ ಮಳೆಗೆ ಚಲಿಸುತ್ತಿದ್ದ ಒಮ್ನಿ ಕಾರಿನ ಮೇಲೆ ಹಲಸಿನ ಮರವೊಂದು ಮುರಿದು ಬಿದ್ದ ಪರಿಣಾಮ ಕಾರು ಜಖಂಗೊಂಡ ಘಟನೆ ನಡೆದಿದೆ. ಮರ ರಸ್ತೆಗೆ ಬಿದ್ದ ಪರಿಣಾಮ ಸುಮಾರು ಅರ್ಧಗಂಟೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೊಯಿಲ ನೀರಾಜೆ ಸಮೀಪ ರಸ್ತೆ ಬದಿಯಲ್ಲಿದ್ದ ಹಲಸಿನ ಮರವೊಂದು ಮುರಿದುಬಿದ್ದಿದೆ. ಕೊಯಿಲದಿಂದ ಆತೂರಿಗೆ ಯೋಗೀಶ್ ಎಂಬುವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾರಿನ ಮೇಲೆ ಮರ ಮುರಿದು ಬಿದ್ದಿದೆ.
ಘಟನೆಯಲ್ಲಿ ಒಮ್ನಿ ಜಖಂಗೊಂಡಿದ್ದು, ಚಾಲಕ ಯೋಗೀಶ್ ಸಣ್ಣ-ಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಮುರಿದು ಬಿದ್ದ ಪರಿಣಾಮ ಸುಮಾರು ಅರ್ಧತಾಸು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಯ ಪಕ್ಕದಲ್ಲಿ ಸಾಕಷ್ಟು ಅಪಾಯಕಾರಿ ಮರಗಳಿದ್ದು ಕೆಲವೊಂದು ಮರಗಳು ಮುರಿದು ಬೀಳುವ ಹಂತದಲ್ಲಿವೆ. ರಸ್ತೆ ಬದಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಮೂಲಕ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.