ಮಂಗಳೂರು :ಇತ್ತೀಚೆಗೆ ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಇದೀಗ ಮಾರುಕಟ್ಟೆಯಲ್ಲಿ ಬರುತ್ತಿರುವ ಎಲೆಕ್ಟ್ರಿಕ್ ವಾಹನಗಳಿಗಿಂತ ವಿಭಿನ್ನವಾಗಿ ತಮ್ಮದೇ ವಿಶಾಲ ಕ್ಯಾಂಪಸ್ನ ಗಸ್ತು ತಿರುಗುವಿಕೆಗೆ ಮಂಗಳೂರಿನ ಎನ್‌ಐಟಿಕೆ ತಂಡ ಇ ಬೈಕ್‌ವೊಂದನ್ನು ಅಭಿವೃದ್ಧಿಗೊಳಿಸಿದೆ. ಮಂಗಳೂರಿನ ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ ಸದಾ ಹೊಸ ತಂತ್ರಜ್ಞಾನದ ಪ್ರಯೋಗ ಮಾಡುತ್ತಲೇ ಇರುತ್ತದೆ. ಇದೀಗ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ತಂಡ ವಿದ್ಯುತ್ ಇ ಮೊಬಿಲಿಟಿ ಸರಣಿಯಲ್ಲಿ ಇ ಬೈಕ್ ಅಭಿವೃದ್ದಿಪಡಿಸಿದೆ.
ಎನ್‌ಐಟಿಕೆ ಕ್ಯಾಂಪಸ್ ಮುನ್ನೂರು ಎಕರೆ ವಿಶಾಲ ಪ್ರದೇಶದಲ್ಲಿದೆ. ಇಲ್ಲಿನ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಗಸ್ತು ತಿರುಗುತ್ತಲೇ ಇರುತ್ತಾರೆ. ಇವರ ಅನುಕೂಲಕ್ಕಾಗಿ ಇ ಬೈಕ್ ಅಭಿವೃದ್ಧಿಪಡಿಸಲಾಗಿದೆ. ಇಬ್ಬರು ಸೆಕ್ಯುರಿಟಿ ಸಿಬ್ಬಂದಿ ಬೈಕ್ನಲ್ಲಿ ಕೂರಲು ಸಾಧ್ಯವಾಗುವಂತೆ ಅವರು ಬಳಸುವ ಲಾಠಿ, ಟಾರ್ಚ್, ಮೊಬೈಲ್, ವಾಕಿಟಾಕಿ ಮೊದಲಾದವುಗಳನ್ನು ಇಡಲು ಬೇಕಾದ ಸ್ಥಳವಕಾಶದೊಂದಿಗೆ ಇ- ಬೈಕ್ ತಯಾರು ಮಾಡಲಾಗಿದೆ.