ಬೆಳ್ತಂಗಡಿ:ಕೆಂಪು ಕಲ್ಲಿನ ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿಯನ್ನು ಅಗೆದು ಅಡಿಕೆ ಗಿಡ ಮತ್ತು ಗದ್ದೆಯಾಗಿ ಪರಿವರ್ತಿಸಿ ಕೃಷಿ ಕ್ರಾಂತಿ ಮಾಡಿ ಊರಿಗೆ ಮಾದರಿಯಾಗಿದ್ದಾರೆ ಇಲ್ಲೊಬ್ಬ ರೈತ.
ಕರಾಯ ಗ್ರಾಮದ ಉಜಿರ್ ಬೆಟ್ಟು ಎಂಬಲ್ಲಿ ಬಂಗೇರ್‌ಕಟ್ಟೆ ನಿವಾಸಿ ಯೂಕೂಬ್ ಎಂಬುವರ 1.74 ಎಕರೆ ಮುರ ಕಲ್ಲಿನಿಂದ ಕೂಡಿದ್ದ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿ ಇದೀಗ ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆಗೊಂಡಿದೆ. ಯಾಕೂಬ್ ತಣ್ಣೀರುಪಂಥ ಗ್ರಾಮದ ಉರ್ನಡ್ಕ ನಿವಾಸಿ ಆದಂ ಅಲ್ ಮದೀನ ಅವರ ಸಹಕಾರದೊಂದಿಗೆ ಕೆಂಪು ಕಲ್ಲು ತೆಗೆದು ಮತ್ತೆ ಮಣ್ಣು ಹಾಕಿ ಸಮತಟ್ಟು ಮಾಡಿ ಕೃಷಿ ಮಾಡಿದ್ದಾರೆ.
ಬರಡು ಭೂಮಿಯಲ್ಲಿ ಕೃಷಿ ಮಾಡಿದ ರೈತ 1.74 ಎಕರೆ ಭೂಮಿಯಲ್ಲಿ ಅರ್ಧ ಎಕರೆಯಲ್ಲಿ ಉಳುಮೆ ಮಾಡಿ ನೇಜಿ ನಾಟಿ ಮಾಡಿ ಭತ್ತದ ಕೃಷಿ ಮಾಡಿದ್ದೇವೆ. ಉಳಿದ ಜಾಗದಲ್ಲಿ ಈಗಾಗಲೇ 450 ಅಡಿಕೆ ಗಿಡ ನೆಡಲಾಗಿದೆ. ಇನ್ನೂ 500 ಗಿಡ ನೆಡುವುದಕ್ಕೆ ತಯಾರಿ ನಡೆಸುತ್ತಿದ್ದೇವೆ ಎಂದು ಯಾಕೂಬ್ ತಿಳಿಸಿದ್ದಾರೆ.
ಮುರ(ಕೆಂಪು) ಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯನ್ನು ಕೃಷಿ ಇಲಾಖೆಯವರಿಗೆ ತೋರಿಸಿ ಮಾಹಿತಿ ಕೇಳಿದ್ದೆವು. ಮೇಲಿನ ಹಂತದಲ್ಲಿರುವ ಕೆಂಪು ಕಲ್ಲುಗಳನ್ನು ತೆಗೆದರೆ ಕೃಷಿಗೆ ಬಳಸಬಹುದು ಎಂದು ಕೃಷಿ ಇಲಾಖೆಯವರು ಮಾಹಿತಿ ನೀಡಿದರು. ಈ ಬಗ್ಗೆ ಅವರಿಂದ ದೃಢೀಕರಣ ಪಡೆದುಕೊಂಡು ಬಳಿಕ ಗಣಿ ಇಲಾಖೆಯಿಂದ ಕೆಂಪು ಕಲ್ಲು ತೆಗೆಯಲು ಅನುಮತಿಗೆ ಮನವಿ ಸಲ್ಲಿಸಿದೆವು. ಗಣಿ ಇಲಾಖೆಯವರು ಪರಿಶೀಲನೆ ನಡೆಸಿ ಕಲ್ಲು ತೆಗೆಯುವುದಕ್ಕೆ ಅನುಮತಿ ನೀಡಿದರು.
ಸರ್ಕಾರ ನಿಗದಿಪಡಿಸಿದ ರಾಜಧನ ಕಟ್ಟಿ ಕಾನೂನು ಪ್ರಕಾರ ಕಲ್ಲುಗಳನ್ನು ತೆಗೆದು ಬಳಿಕ ಸಮತಟ್ಟು ಮಾಡಿ ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಲು ಸಾಧ್ಯವಾಯಿತು ಎಂದು ಅಲ್ ಮದೀನ ಆದಂ ತಿಳಿಸಿದ್ದಾರೆ. ಭತ್ತದ ವಿಶಿಷ್ಟ ನಾಟಿ ವೀಕ್ಷಿಸಲು ಪಂಚಾಯತ್ ಆಡಳಿತಾಧಿಕಾರಿ ಶೇಷಗಿರಿ ನಾಯಕ್ ಹಾಗೂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಜಾಗ ಮುರ ಕಲ್ಲಿನಿಂದ ಕೂಡಿತ್ತು. ಹಾಗೆಯೇ ಬಿಡುವುದಕ್ಕೆ ಮನಸ್ಸು ಇರಲಿಲ್ಲ. ಕೃಷಿ ಇಲಾಖೆಯವರಿಂದ ಸಲಹೆ ಪಡೆದು ಗೆಳೆಯ ಆದಂ ಅಲ್ ಮದೀನ ಅವರ ಸಹಾಯ ಪಡೆದುಕೊಂಡು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸಿದೆವು. ಇಚ್ಛಾಶಕ್ತಿ ಇದ್ದರೆ ಸಾಧನೆ ಮಾಡಬಹುದು. ಇದರಲ್ಲಿ ಯಶಸ್ಸು ಕಾಣುವ ಭರವಸೆ ಹೊಂದಿದ್ದೇವೆ ಎಂದು ಯೂಕೂಬ್ ಬಂಗೇರ್‌ಕಟ್ಟೆ ತಿಳಿಸಿದರು.
ನಿಜವಾಗಲೂ ಇವರ ಸಾಧನೆ ಶ್ಲಾಘನೀಯ. ಯಾವುದೇ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕೃಷಿ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮೂಲತಃ ಕೃಷಿಕರಾಗಿದ್ದ ಇವರು ಈ ಪ್ರದೇಶದ ಕಲ್ಲು ತೆರವುಗೊಳಿಸಲು ಪಂಚಾಯತ್ನಿಂದ ಅನುಮತಿ ಕೇಳಿದ್ದರು. ಪಂಚಾಯತ್ ಅನುಮತಿ ಪಡೆದು ಕೃಷಿ ಇಲಾಖೆಯವರು ಬಂದು ಮಣ್ಣು ಪರೀಕ್ಷೆ ನಡೆಸಿದ್ದಾರೆ. ಅಲ್ಲದೆ ಅರ್ಧ ಎಕರೆ ಜಾಗದಲ್ಲಿ ಕೋಣಗಳಿಂದಲೇ ಉಳುಮೆ ಮಾಡಿ ಭತ್ತದ ಕೃಷಿ ಮಾಡಿದ್ದಾರೆ. ನೀರಿಗಾಗಿ ಬೋರ್ವೆಲ್ ಕೊರೆಸಿದ್ದು, ಅದರಲ್ಲೂ ಒಳ್ಳೆಯ ನೀರು ಸಿಕ್ಕಿದೆ. ಈಗಾಗಲೇ ಸುಮಾರು 450 ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಇನ್ನೂ 500 ಗಿಡ ನೆಡುವ ಬಗ್ಗೆ ವ್ಯವಸ್ಥೆ ಮಾಡುತಿದ್ದಾರೆ. ಇವರ ಈ ಪ್ರಯತ್ನಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.