ಮಂಗಳೂರು: ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮನೆ ಮನೆಗಳಲ್ಲಿಯೂ ಗಣೇಶನ ಮೂರ್ತಿ ಪ್ರತಿಷ್ಠಾಪನೆಯ ಸಡಗರ ಕಂಡು ಬರುತ್ತಿದೆ. ಮಂಗಳೂರಿನ ಕುಟುಂಬವೊಂದು ಸುಮಾರು 90 ವರ್ಷಗಳಿಂದ ಗಣೇಶನ ಮಣ್ಣಿನ ಮೂರ್ತಿ ತಯಾರಿಯ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ರಾಮಚಂದ್ರ ರಾವ್ ಕುಟುಂಬದ ಕೈಯಲ್ಲರಳಿದ ಗಣೇಶನ ಮೂರ್ತಿಗಳು ಹೌದು, 90 ವರ್ಷಗಳ ಹಿಂದೆ ಮೋಹನ್ ರಾವ್ ಎಂಬವರು ಆಸಕ್ತಿಯಿಂದ ಗಣೇಶನ ಮೂರ್ತಿ ತಯಾರಿ ಮಾಡಲು ತೊಡಗಿಸಿಕೊಂಡರು. ಅವರ ಬಳಿಕ ಈಗ ಅವರ ಮಕ್ಕಳು ಅದನ್ನು ಶ್ರದ್ಧೆ ಭಕ್ತಿಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮೋಹನ್ ರಾವ್ರವರ ನಾಲ್ಕು ಮಕ್ಕಳು ಈ ಮೂರ್ತಿ ತಯಾರಿಕೆಯ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಮಕ್ಕಳು, ಮೊಮ್ಮಕ್ಕಳೂ ಮೂರ್ತಿ ತಯಾರಿಯಲ್ಲಿ ಕೈ ಜೋಡಿಸುತ್ತಾರೆ. ಹೀಗೆ ಈ ಕುಟುಂಬದ ನಾಲ್ಕು ತಲೆಮಾರು ಈ ಗಣೇಶನ ಮೂರ್ತಿ ತಯಾರಿಯಲ್ಲಿ ನಿರತವಾಗಿದೆ.
ಗಣೇಶನ ಮೂರ್ತಿಯ ತಯಾರಿಯಲ್ಲಿ ಈ ಕುಟುಂಬದ ಕ್ರಿಯಾಶೀಲತೆ ನಿಜವಾಗಿಯೂ ಮೆಚ್ಚುವಂತದ್ದು. ಇವರು ತಯಾರಿಸಿದ ಎಲ್ಲಾ ಗಣೇಶನ ಮೂರ್ತಿಗಳು ಹೋಲಿಕೆಯಲ್ಲಿ ಒಂದೇ ರೀತಿ ಇದೆ. ಇದು ಈ ಕುಟುಂಬದ ಮೂರ್ತಿ ತಯಾರಕರ ತಾಳ್ಮೆಯ ಪ್ರತೀಕ ಎಂದರೆ ತಪ್ಪಲ್ಲ.
ವರ್ಷಂಪ್ರತಿ ಈ ಕುಟುಂಬ ಸುಮಾರು 225ಕ್ಕೂ ಅಧಿಕ ಗಣೇಶನ ಮೂರ್ತಿ ತಯಾರಿ ಮಾಡಿ ಗಣೇಶ ಪ್ರತಿಷ್ಠಾಪನೆಗೆ ನೀಡುತ್ತಾರೆ. 50 ವರ್ಷಗಳಿಗಿಂತ ಅಧಿಕ ಕಾಲದಿಂದಲೂ ಇವರಲ್ಲೇ ಮೂರ್ತಿ ತಯಾರು ಮಾಡಿಸುವ ಸಂಘ ಸಂಸ್ಥೆಗಳು ಇವೆಯಂತೆ. ಇವರು ಆವೆಮಣ್ಣಿನಲ್ಲಿಯೇ ಮೂರ್ತಿ ತಯಾರಿಸುತ್ತಿದ್ದು, ರಾಸಾಯನಿಕ ಮಿಶ್ರಣ ಮಾಡದ ಬಣ್ಣವನ್ನು ಬಳಸುವ ಮೂಲಕ ಇವರು ಪರಿಸರ ಸ್ನೇಹಿ ಗಣೇಶನನ್ನು ತಯಾರು ಮಾಡುತ್ತಿದ್ದಾರೆ. ಇವರ ಗಣೇಶನ ಮೂರ್ತಿಗೆ ಅಮೆರಿಕಾದಲ್ಲೂ ಬೇಡಿಕೆ ಇರುವುದು ವಿಶೇಷ.
ಈ ಬಗ್ಗೆ ಮೂರ್ತಿ ತಯಾರಕ ರಾಮಚಂದ್ರ ರಾವ್ ಮಾತನಾಡಿ, ನಮ್ಮ ತಂದೆಯವರು ಹಿಂದೆ ಬಾಂಬೆಯಲ್ಲಿ ಗಣೇಶನ ಮೂರ್ತಿ ತಯಾರು ಮಾಡುತ್ತಿದ್ದರು. ಬಳಿಕ ಮಂಗಳೂರಿಗೆ ಬಂದು ಇಲ್ಲಿ ತಯಾರು ಮಾಡಲು ಆರಂಭಿಸಿದರು. ಅವರ ಬಳಿಕ ಈಗ ನಾವು ಮುಂದುವರಿಸುತ್ತೇವೆ. ನಮ್ಮಲ್ಲಿ ದ.ಕ.ದಿಂದ ಮಾತ್ರವಲ್ಲ ಕೇರಳದ ಕಾಸರಗೋಡು, ಕುಂಬಳೆ, ಅಲ್ಲದೆ ಅಮೆರಿಕಾದಿಂದ ಬಂದು ಮೂರ್ತಿ ಕೊಂಡೊಯ್ಯುತ್ತಾರೆ. ನಾವು ನಮ್ಮ ಕುಟುಂಬದ ಕನಿಷ್ಠ 20 ಮಂದಿ ಸೇರಿ ಈ ಮೂರ್ತಿ ತಯಾರು ಮಾಡುತ್ತೇವೆ. ಗಣೇಶ ಮಾತ್ರವಲ್ಲ ನವರಾತ್ರಿಗೆ ಶಾರದಾ ಮೂರ್ತಿಯನ್ನೂ ನಾವು ತಯಾರಿಸುತ್ತೇವೆ ಎಂದು ಹೇಳಿದರು.