ಮಂಗಳೂರು: ಎಸ್‌ಡಿಆರ್‌ಎಫ್‌ಗೆ 25 ಮಂದಿ ನಿವೃತ್ತ ಸೈನಿಕರು ಸೇರ್ಪಡೆ - ರಾಜ್ಯ ವಿಪತ್ತು ನಿರ್ವಹಣಾ ಪಡೆ
ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಸೇವೆಗೆ 25 ಮಂದಿ ನಿವೃತ್ತ ಸೈನಿಕರು ಸೇರ್ಪಡೆಯಾಗಿದ್ದಾರೆ.
ಮಂಗಳೂರು: ನಗರದಲ್ಲಿ ಎಸ್‌ಡಿಆರ್‌ಎಫ್ ಸೇವೆಗೆ 25 ಮಂದಿ ನಿವೃತ್ತ ಸೈನಿಕರು ಸೇರ್ಪಡೆಯಾಗಿದ್ದಾರೆ. ಅವರಿಗೆ ತರಬೇತಿ ನಡೆಯುತ್ತಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ ಯೂನಸ್ ಅಲಿ ಕೌಸರ್ ತಿಳಿಸಿದ್ದಾರೆ.
ನಗರದ ಪಾಂಡೇಶ್ವರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ನಡೆಯುತ್ತಿರುವ ಎಸ್‌ಡಿಆರ್‌ಎಫ್ ತರಬೇತಿ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಎಸ್‌ಡಿಆರ್‌ಎಫ್ ಅನ್ನು ಬಲಿಷ್ಠಗೊಳಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ನಿವೃತ್ತ ಸೈನಿಕರನ್ನು ನೇಮಿಸಲಾಗುತ್ತಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಕೆಎಸ್‌ಆರ್‌ಪಿ, ಆಂತರಿಕ ಭದ್ರತಾ ಪಡೆ ಮೊದಲಾದ ವಿಭಾಗಗಳಿಂದಲೂ ಎಸ್‌ಡಿಆರ್‌ಎಫ್‌ಗೆ ಸಿಬ್ಬಂದಿ ನೇಮಿಸಿಕೊಳ್ಳಬೇಕಾದ ಪ್ರಸ್ತಾವವಿದೆ. ಆದರೆ, ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆಯ ತಲಾ 25 ಮಂದಿಯ ಸೇವೆ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದರ ಜತೆಗೆ ಇದೀಗ ಪ್ರತಿಯೊಂದು ಘಟಕದಲ್ಲಿಯೂ ತಲಾ 25 ಮಂದಿ ನಿವೃತ್ತ ಸೈನಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸರಕಾರದಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.