ಪುತ್ತೂರು (ದ.ಕ): 2021ರ ಜನವರಿ 3ರಂದು ಪುತ್ತೂರಿನ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿತ್ತು. ಪರಿಣಾಮ, ಬಸ್‌ನಲ್ಲಿದ್ದ 7 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಿದೆ.
ಅಪಘಾತದಲ್ಲಿ ಮೃತಪಟ್ಟಿರುವವರ ಕುಟುಂಬದ ಪರಿಹಾರಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಮನವಿಯಂತೆ ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ತಲಾ ರೂ. 2 ಲಕ್ಷ ಪರಿಹಾರ ಮಂಜೂರು ಮಾಡಿದ್ದಾರೆ.
ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಮಂಜೂರು ಅಪಘಾತದಲ್ಲಿ ಬಲ್ನಾಡು ಚನಿಲ ಪಾಲೆಚ್ಚಾರು ಚೋಮ ನಾಯ್ಕರವರ ಪುತ್ರ ರಾಜೇಶ್(38) ಅವರ ಪುತ್ರ ಆದರ್ಶ (14) ಕುಂಜೂರುಪಂಜ ದೇವಸ್ಯ ನಾರಾಯಣರವರ ಪುತ್ರಿ ಸುಮತಿ (26) ಪಾಣಾಜೆ ಆರ್ಲಪದವು ಅರ್ಧಮೂಲೆ ನಾರಾಯಣರವರ ಪುತ್ರ ಶ್ರೇಯಸ್ (13), ಸುಳ್ಯ ಸೋಣಂಗೇರಿ ಜಾಲ್ಸೂರು ಗ್ರಾಮದ ಕುಕ್ಕಂದೂರು ನಾರಾಯಣ ನಾಯ್ಕರ ಪುತ್ರ ರವಿಚಂದ್ರ (40) ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಸಮೀಪದ ಕಳೆಂಜಿಲ ವಸಂತ ನಾಯ್ಕ ಪತ್ನಿ ಸೇಸಮ್ಮ ಯನೆ ಜಯಲಕ್ಷ್ಮೀ, ನಿರ್ವಾಹಕ ಬಂಟ್ವಾಳ ನರಿಕೊಂಬು ಶ್ರೀಧರ ಪೂಜಾರಿಯವರ ಪುತ್ರ ಶಶಿಧರ್ ಮೃತಪಟ್ಟಿದ್ದರು.
ಪರಿಹಾರ ಘೋಷಣೆಗೆ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಬಸ್ಗೆ ವಿಮಾ ಸೌಲಭ್ಯ ಇರಲಿಲ್ಲ, ಜೊತೆಗೆ ಮೃತಪಟ್ಟವರಿಗೂ ಯಾವ ವಿಮೆಯೂ ಇರಲಿಲ್ಲ. ಹೀಗಾಗಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಘೋಷಿಸಲಾಗಿದೆ.
ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ.ನಂತೆ ಒಟ್ಟು 14 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಲಾಗಿದೆ.