ಕರ್ನಾಟಕ

karnataka

ETV Bharat / state

42 ದಿನ 18 ಮಂದಿ ಒಂದೇ ಮನೆಯಲ್ಲಿ 'ಲಾಕ್​': ಸಲಹಿದವಳು ಒಬ್ಬಾಕೆ ತಾಯಿ... ಏನಿದು ಅಜ್ಞಾತವಾಸದ ಕಥೆ? - ಕೊರೊನಾ ಲಾಕ್‌ಡೌನ್

ದೇಶಾದ್ಯಂತ ಲಾಕ್​ಡೌನ್ ಘೋಷಣೆಯಾಗಿ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಅತಿಥಿಗಳನ್ನು ಕಾಪಾಡುವ ಹಾಗೂ ಸಾಕುವ ದೊಡ್ಡ ಜವಾಬ್ದಾರಿ ತುಕ್ರು ಅವರ ಮೇಲೆ ಬಿತ್ತು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಅಷ್ಟೂ ಜನರನ್ನು ಸಾಕುವುದು ತೀರಾ ಹೊರೆಯಾಗಿತ್ತು. ಆದರೂ ಧೃತಿಗೆಡದ ತುಕ್ರು ತಮ್ಮಲ್ಲಿರುವಷ್ಟರಲ್ಲೇ ಹಂಚಿ ತಿಂದು 41 ದಿನ ಕಳೆದಿದ್ದಾರೆ.

Puttur
ಪುತ್ತೂರು

By

Published : May 2, 2020, 9:14 PM IST

ಪುತ್ತೂರು: ಮಗಳ ನಿಶ್ಚಿತಾರ್ಥಕ್ಕೆ ಬಂದು ಕೊರೊನಾ ಲಾಕ್‌ಡೌನ್ ನಲ್ಲಿ ಬಂಧಿಯಾಗಿದ್ದ 18 ಮಂದಿ ಸಂಬಂಧಿಕರನ್ನು ಕಳೆದ 42 ದಿನಗಳಿಂದ ಯಾರೊಂದಿಗೂ ಕೈಚಾಚದೇ ಸಾಕುತ್ತಿದ್ದ ಬಡ ಮಹಿಳೆ ತುಕ್ರು ಅವರ ಮಾನವೀಯ ಕಳಕಳಿ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಲ್ಮರದ ಗುಂಪಕಲ್ಲು ಎಂಬಲ್ಲಿರುವ ತುಕ್ರು ಅವರು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಮಗಳು ಶಾರದಾ ಅವರಿಗೆ ಶೃಂಗೇರಿಯ ಯುವಕ ಜಯರಾಮ್​ನೊಂದಿಗೆ ಮಾರ್ಚ್​ 21 ರಂದು ನಿಶ್ಚಿತಾರ್ಥ ನಡೆದಿತ್ತು. ಮಂಗಳೂರು, ಮಡಿಕೇರಿ, ಸುಬ್ರಹ್ಮಣ್ಯದಿಂದ ಸಂಬಂಧಿಕರು ಆಗಮಿಸಿದ್ದು, ಮಾರ್ಚ್ 22 ರಂದು ತಮ್ಮ ಊರುಗಳಿಗೆ ಹೊರಡಬೇಕಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಂಡ ಜನತಾ ಕರ್ಫ್ಯೂ ಇವರ ಪ್ರಯಾಣಕ್ಕೆ ತಡೆ ಉಂಟು ಮಾಡಿತ್ತು.

ಲಾಕ್​ಡೌನ್​ನಲ್ಲಿ ಮನೆಯಲ್ಲಿ ಬಂಧಿಯಾಗಿರುವ ಜನ

ಬಳಿಕ ದೇಶಾದ್ಯಂತ ಲಾಕ್​ಡೌನ್ ಘೋಷಣೆಯಾಗಿ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಅತಿಥಿಗಳನ್ನು ಕಾಪಾಡುವ ಹಾಗೂ ಸಾಕುವ ದೊಡ್ಡ ಜವಾಬ್ದಾರಿ ತುಕ್ರು ಅವರ ಮೇಲೆ ಬಿತ್ತು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಅಷ್ಟೂ ಜನರನ್ನು ಸಾಕುವುದು ತೀರಾ ಹೊರೆಯಾಗಿತ್ತು, ಆದರೂ ಧೃತಿಗೆಡದ ತುಕ್ರು ತಮ್ಮಲ್ಲಿರುವಷ್ಟರಲ್ಲೇ ಹಂಚಿ ತಿಂದು 41 ದಿನ ಕಳೆದಿದ್ದಾರೆ.

ಗಂಜಿ-ಗುಜ್ಜೆ ಕಜಿಪ್ಪು

ಹೌದು, ಬರೀ ಗಂಜಿ ಹಾಗೂ ಗುಜ್ಜೆ ಕಜಿಪ್ಪು (ಅಕ್ಕಿ ಗಂಜಿ- ಹಲಸಿನ ಕಾಯಿ ಸಾಂಬಾರ್) ಅದೂ ಪಡಿತರ ಕಾರ್ಡ್​​​​​ನಲ್ಲಿ ಸಿಕ್ಕ ಅಕ್ಕಿ ಹಾಗೂ ಮನೆ ಸುತ್ತಲೇ ಹೇರಳವಾಗಿ ಬೆಳೆದಿದ್ದ ಹಲಸಿನ ಕಾಯಿಯ ಸಂಬಾರ್​ ಮಾಡಿ ಆಕೆ 18 ಮಂದಿಗೆ ಊಟ, ಆಶ್ರಯ ನೀಡಿದ್ದಳು. 41 ದಿನಗಳವರೆಗೆ ಸಂಬಂಧಿಕರನ್ನು ನೋಡಿಕೊಂಡ ತುಕ್ರುವಿಗೆ ಮರುದಿನದಿಂದ (42ನೇ ದಿನ) ಮನೆಯಲ್ಲಿ ಅವರನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಕೈಯ್ಯಲ್ಲಿ ಕಾಸಿಲ್ಲದೇ, ಮನೆಯಲ್ಲಿ ಅಕ್ಕಿ ಬೇಳೆಯಿಲ್ಲದೆ ಕುಟುಂಬ ಕಂಗಾಲಾಯಿತು.

ಬಳಿಕ ನೆರವಿಗೆ ಬಂದ ಪುತ್ತೂರು ಪತ್ರಕರ್ತರ ಸಂಘದಿಂದ ಮಾಹಿತಿ ಹರಡಲಾಯಿತು. ಸುದ್ದಿಯಿಂದ ಎಚ್ಚೆತ್ತ ಅಧಿಕಾರಿ ವರ್ಗ ಈ ಕುಟುಂಬಕ್ಕೆ ಆಹಾರದ ಕಿಟ್​ ನೀಡಿದರು. ಬಳಿಕ ಅಲ್ಲಿದ್ದವರನ್ನು ಅವರವರ ಊರಿಗೆ ಕಳುಹಿಸುವ ಏರ್ಪಾಡು ಮಾಡಲಾಯಿತು. ಶಾಸಕರ ವಾರ್​ರೂಂ ಸಹಾಯದಿಂದ ಅಲ್ಲಿದ್ದ 18 ಜನರನ್ನು ಅವರ ಊರುಗಳಿಗೆ ವಾಹನದ ವ್ಯವಸ್ಥೆ ಮಾಡಿ ಇಂದು ಕಳುಹಿಸಿಕೊಡಲಾಯಿತು. ತಹಶೀಲ್ದಾರ್ ರಮೇಶ್ ಬಾಬು, ಶಾಸಕ ಸಂಜೀವ ಮಠಂದೂರು ಹಾಗೂ ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಸಹಾಯಕ್ಕೆ ನಿಂತಿದ್ದರು. ಈ ಸಂದರ್ಭದಲ್ಲಿ ನಗರ ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ಶಾಸಕರ ವಾರ್‌ರೂಂ ಸಂಯೋಜಕ ರಾಜೇಶ್ ಬನ್ನೂರು, ಚಂದ್ರಶೇಖರ್ ಬಪ್ಪಳಿಗೆ , ರಾಮ‌ದಾಸ್ ಹಾರಾಡಿ, ಪಿಜಿ ಜಗನ್ನೀವಾಸ ರಾವ್, ಕಂದಾಯ ನಿರೀಕ್ಷಕ ರವಿಕುಮಾರ್, ಗ್ರಾಮಕರಣಿಕ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

ABOUT THE AUTHOR

...view details