ಚಿತ್ರದುರ್ಗ: ಸಾಲ ಪಡೆದು ಮಠ ಕಟ್ಟಲಾಗಿದೆ. ನಾನು ಯಾವುದೇ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಂದ ಪಡೆದಿಲ್ಲ. ಆಸ್ತಿ ಪರಭಾರೆ ಸಹ ಮಾಡಿಲ್ಲ ಎಂದು ಹೊಸದುರ್ಗ ಪಟ್ಟಣದ ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿಯವರು ಸ್ಪಷ್ಟನೆ ನೀಡಿದರು.
ಕುಂಚಾದ್ರಿ ಮಠದ ಪೀಠಾಧ್ಯಕ್ಷರಾದ ಶಾಂತವೀರ ಸ್ವಾಮೀಜಿ ಇಂದು ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್, ಸಹಕಾರಿ ಸಂಘಗಳು, ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಮಠ ಕಟ್ಟಲಾಗಿದೆ. ಯಾರಿಂದಲೂ ಚಿನ್ನಾಭರಣ ಪಡೆದಿಲ್ಲ. ಮಠ ಕಟ್ಟಲು, ಕಾರು ಕೊಳ್ಳಲು ದೇಣಿಗೆಯನ್ನೂ ಪಡೆದಿಲ್ಲ ಎಂದರು.
ನನ್ನ ಬಳಿ 3 ಪಾನ್ಕಾರ್ಡ್ಗಳಿರುವು ಸತ್ಯ. ಒಂದು ಪಾನ್ಕಾರ್ಡ್ ಟ್ರಸ್ಟ್ ಹೆಸರಿನಲ್ಲಿದೆ. ಮತ್ತೊಂದು ದೇವಸ್ಥಾನದ ಹೆಸರಲ್ಲಿದೆ. ಮಗದೊಂದನ್ನು ವೈಯಕ್ತಿಕವಾಗಿ ಬಳಸಲಾಗ್ತಿದೆ. ಆ ಪಾನ್ಕಾರ್ಡ್ ತಂದೆ ಹೆಸರು ಬಂದಾಕ್ಷಣ ಆಸ್ತಿ ಕಬಳಿಕೆ ಆರೋಪ ಹೊರಿಸುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದಿಂದ ಹತ್ತು ಕೋಟಿ ಪಡೆಯಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು. ಕರ್ನಾಟಕ ಸರ್ಕಾರ ಸಮುದಾಯ ಭವನಕ್ಕೆ ಕೊಟ್ಟಿರುವುದು 3 ಕೋಟಿ ರೂಪಾಯಿ ಮಾತ್ರ. ಮಠಕ್ಕೆ ಯಾರಿಂದಲೂ ದೇಣಿಗೆ ಬಂದಿಲ್ಲ. ಕುಂಚಿಟಿಗ ಮಠ 2008ರಲ್ಲಿ ನೊಂದಣಿಯಾಗಿದೆ. ಸ್ವಂತ ಶ್ರಮದಿಂದ ಈರುಳ್ಳಿ, ದಾಳಿಂಬೆ ಬೆಳೆದು ಮಠ ಕಟ್ಟಲಾಗಿದೆ ಎಂದು ಸ್ಪಷ್ಟನೆ ನೀಡಿದರು.