ಚಿತ್ರದುರ್ಗ: ಈಜಲು ತೆರಳಿದ್ದ ಮೂವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ನಂದನಹೊಸೂರು ಗ್ರಾಮದ ಗಿರೀಶ್ (18), ಹೊರಕೆರೆದೇವರಪುರ ಗ್ರಾಮದ ಸಂಜಯ್ (18) ಹಾಗೂ ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಮೃತ ವಿದ್ಯಾರ್ಥಿಯೊಬ್ಬನ ತಂದೆ ಎತ್ತುಗಳ ಮೈ ತೊಳೆಯಲೆಂದು ಕೆರೆಗೆ ಹೋಗಿದ್ದರು. ಈ ವೇಳೆ ಮೂವರು ಅವರನ್ನೇ ಹಿಂಬಾಲಿಸಿಕೊಂಡ ಹೋಗಿದ್ದರು. ಆದರೆ, ಕೆರೆಯಲ್ಲಿ ಈಜಾಡುತ್ತಿದ್ದಾಗ ಆಳದ ಜಾಗದಲ್ಲಿ ಸಿಲುಕಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು ಇದನ್ನೂ ಓದಿ:ಬಾಟಲಿಯಿಂದ ಸರತಿ ಸಾಲಿನಲ್ಲಿ ನೀರು ಕುಡಿದ ಎರಡು ನಾಗರಹಾವುಗಳು: ವಿಡಿಯೋ ವೈರಲ್
ಪೋಷಕರಾದ ನಾವು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಈ ಘಟನೆ ನಡೆಯಬಾರದಿತ್ತು. ದುರಾದೃಷ್ಟವಶಾತ್ ನಡೆದಿದೆ. ರೈತಾಪಿ ಜನರಾದ ನಾವು ಎತ್ತು, ಹಸು, ಎಮ್ಮೆಗಳ ಮೈ ತೊಳೆಯುವುದು ಸರ್ವೇ ಸಾಮಾನ್ಯ. ಆದರೆ, ಪೋಷಕರಾದ ನಾವು ಮಕ್ಕಳನ್ನು ಅಂತಹ ಜಾಗಕ್ಕೆ ಕರೆದುಕೊಂಡು ಹೋಗುವ ಮುನ್ನ ಎಚ್ಚರ ವಹಿಸಬೇಕು. ಮೃತ ಮೂವರು ಬಾಲ್ಯ ಸ್ನೇಹಿತರಾಗಿದ್ದರಿಂದ ಕೂಡಿಕೊಂಡು ಹೋಗಿದ್ದಾರೆ. ದಿನ ಕಳೆದರೆ ಪರೀಕ್ಷೆ ಇತ್ತು. ಪರೀಕ್ಷೆ ಬರೆದ ಬಳಿಕ ಮುಂದಿನ ದಿನಗಳಲ್ಲಿ ಅವರು ಏನಾಗುತ್ತಿದ್ದರೋ ಗೊತ್ತಿಲ್ಲ. ವೈದ್ಯರಾಗುತ್ತಿದ್ದರೋ ಅಥವಾ ಇಂಜಿನಿಯರ್ ಆಗುತ್ತಿದ್ದರೋ ಗೊತ್ತಿಲ್ಲ. ಆದರೆ, ಪರೀಕ್ಷೆಗೂ ಮುನ್ನ ಈ ಘಟನೆ ನಡೆದಿದ್ದು ದುರಾದೃಷ್ಟಕರ. ಮಳೆ ಹೆಚ್ಚಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಪೋಷಕರು ತಮ್ಮ ಮಕ್ಕಳು ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾಜಿ ಜಿ.ಪಂ ಸದಸ್ಯ ಶಿವಮೂರ್ತಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು ನಮ್ಮ ಭಾಗದಲ್ಲಿ ಯಾವತ್ತೂ ಇಂತಹ ದುರಂತ ನಡೆದ ಉದಾಹರಣೆ ಇರಲಿಲ್ಲ. ಇದೇ ಮೊದಲ ಸಲ ಇಂತಹ ದುರಂತವೊಂದು ನಡೆದಿದೆ. ಮೃತ ಮೂವರು ವಿದ್ಯಾರ್ಥಿಗಳು ಪಿಯುಸಿ ಓದುತ್ತಿದ್ದರು. ಅಲ್ಲದೇ ಬಾಲ್ಯ ಸ್ನೇಹಿತರಾಗಿದ್ದರು. ಮೃತ ವಿದ್ಯಾರ್ಥಿಯೊಬ್ಬನ ತಂದೆ ಎತ್ತುಗಳ ಮೈ ತೊಳೆಯಲೆಂದು ಕೆರೆಗೆ ಹೋಗಿದ್ದರು. ಆ ವಿದ್ಯಾರ್ಥಿಯು ಇತರೆ ಇಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಕೆರೆಯತ್ತ ತೆರಳೆದ್ದರು. ಅತ್ತ ಕಡೆ ಆ ವ್ಯಕ್ತಿ ಎತ್ತುಗಳ ಮೈ ತೊಳೆಯುತ್ತಿದ್ದರೆ ಈ ಹುಡುಗರು ಇತ್ತ ಈಜಾಟ ಆಡುತ್ತಿದ್ದರು. ಆದರೆ, ನೀರಿನ ಆಳ ತಿಳಿಯದೇ ಹಾಗೆಯೇ ಮುಂದೆ ಹೋಗಿದ್ದರಿಂದ ಗುಂಡಿಯಲ್ಲಿ ಸಿಲುಕಿದ್ದಾರೆ. ಎತ್ತು ತೊಳೆಯುತ್ತಿದ್ದ ವ್ಯಕ್ತಿ ತನ್ನ ಕೆಲಸದಲ್ಲಿದ್ದರಿಂದ ಇವರನ್ನು ಗಮನಿಸಲು ಸಾಧ್ಯವಾಗಿಲ್ಲ. ಕೆರೆಯ ಅಕ್ಕ-ಪಕ್ಕ ಹೋಗುತ್ತಿದ್ದ ವ್ಯಕ್ತಿಯೊಬ್ಬ ಮೂವರು ಹುಡುಗರು ಮುಳುಗಿದ್ದರುವುದನ್ನು ನೋಡಿ ಕೂಗಿಗೊಂಡಿದ್ದಾನೆ. ಆಗ ತಕ್ಷಣ ಹೋಗಿ ನೋಡಿದಾಗ ಮೂವರು ಮೃತಪಟ್ಟಿದ್ದು ಗೊತ್ತಾಗಿದೆ. ಬಳಿಕ ಸ್ಥಳೀಯರೇ ಸೇರಿಕೊಂಡ ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಸ್ಥಳೀಯ ಕಿರಣ್ಕುಮಾರ್ ಎಂಬುವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹೊಳಲ್ಕೆರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:108 ಕ್ರಿಮಿನಲ್ ಕೇಸ್! ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ