ಚಿತ್ರದುರ್ಗ:ಅತ್ಯಾಚಾರಕ್ಕೆ ಬಲಿಯಾದ ಜಿಲ್ಲೆಯ ಭರಮಸಾಗರದ ಬಾಲಕಿ ಮನೆಗೆ ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಭೇಟಿ ನೀಡಿ, ಸಂತ್ರಸ್ತೆಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದುಷ್ಕೃತ್ಯ ನಡೆಸಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಭರಮಸಾಗರ ಗ್ರಾಮದ ಬಾಲಕಿ ಮನೆಗೆ ಭೇಟಿ ನೀಡಿದ ಸ್ವಾಮೀಜಿ, ಅತ್ಯಾಚಾರ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡಬಾರದು. ಇಂತಹ ಕೃತ್ಯ ಎಸಗಿದವರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಗ್ರಾಮದ ಎಲ್ಲ ಮಹಿಳೆಯರಿಗೂ ರಕ್ಷಣೆ ನೀಡಿದಂತಾಗುತ್ತದೆ. ದುಷ್ಕರ್ಮಿಗಳು ಬಂಧನಕ್ಕೊಳಗಾದಾಗ ನೊಂದವರಿಗೆ ನ್ಯಾಯ ಸಿಕ್ಕಂತಾಗುತ್ತದೆ. ಇದೊಂದು ಪೈಶಾಚಿಕ ಕೃತ್ಯ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ನೊಂದ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.