ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ ಮಳೆ: ತುಂಬಿದ ಕೆರೆ ಕಟ್ಟೆ, ಅಪಾರ ಪ್ರಮಾಣದ ಬೆಳೆ ಹಾನಿ

ಚಿತ್ರದುರ್ಗದಲ್ಲಿ ಮಳೆ ಮುಂದುವರಿದಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

rain in chitradurga
ಚಿತ್ರದುರ್ಗದಲ್ಲಿ ಮಳೆ ಅವಾಂತರ

By

Published : Aug 6, 2022, 8:46 PM IST

Updated : Aug 6, 2022, 9:06 PM IST

ಚಿತ್ರದುರ್ಗ: ಬರದ ನಾಡು ಎಂಬ ಹಣೆಪಟ್ಟಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆರೆ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿಬೆ. ಅಲ್ಲದೆ, ರೈತರ ಅಪಾರ ಪ್ರಮಾಣದ ಬೆಳೆಗಳು ನೀರುಪಾಲಾಗಿವೆ.

ಮಳೆ ಅವಾಂತರ:ತಾಲೂಕಿನ ಪರಶುರಾಂಪುರ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ಮಲ್ಚಿಂಗ್ ಪೇಪರ್ ವಿಧಾನದಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಎರಡು ವರ್ಷಗಳಿಂದ ಈರುಳ್ಳಿ ಬೆಲೆ ಕುಸಿದಿದ್ದರಿಂದ ಈರುಳ್ಳಿಗೆ ಪರ್ಯಾಯವಾಗಿ ಈ ಭಾಗದಲ್ಲಿ ಕಲ್ಲಂಗಡಿ ಬೆಳೆಯಲಾಗಿತ್ತು. ನಾಲ್ಕು ಎಕರೆ ಭೂಮಿಯಲ್ಲಿ 2.5 ಲಕ್ಷ ವ್ಯಯಿಸಿ ಕಲ್ಲಂಗಡಿ ಬೆಳೆ ಬೆಳೆಯಲಾಗಿತ್ತು. ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿರುವಾಗ ಸುರಿದ ಸತತ ಮಳೆ ಸುರಿದ ಹಿನ್ನೆಲೆ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಮಹಿಳೆ ನಾಗಮ್ಮ ಅಳಲು ತೋಡಿಕೊಂಡರು.

ಬೆಳೆ ಹಾನಿ: ಕಲ್ಲಂಗಡಿ ಬೆಳೆಯಲ್ಲಿ ಅಧಿಕ ಆದಾಯ ಪಡೆಯುವ ಸಲುವಾಗಿ ಮಲ್ಚಿಂಗ್ ಪೇಪರ್ ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ಕೊಯಮತ್ತೂರು ವಿವೆಂಟಾ ತಳಿಯ ಬೀಜ ತರಿಸಿ ನಾಟಿ ಮಾಡಿಸಲಾಗಿತ್ತು. ಬೇಸಾಯ, ಕೂಲಿ, ರಸಗೊಬ್ಬರ ಹಾಗೂ ಔಷಧಕ್ಕೆ ಸೇರಿ ಬೆಳೆಗೆ ಒಟ್ಟು 2.5 ಲಕ್ಷ ರೂ. ಖರ್ಚಾಗಿತ್ತು. ಕನಿಷ್ಠ 5 ಲಕ್ಷದಿಂದ 6 ಲಕ್ಷ ಆದಾಯದ ನಿರೀಕ್ಷೆ ಇತ್ತು. ಆದರೆ ಈಗ ಎಲ್ಲವೂ ಹಾಳಾಗಿದೆ ಎಂದರು.

ಚಿತ್ರದುರ್ಗದಲ್ಲಿ ಮಳೆ ಅವಾಂತರ

ರೈತರ ಮನವಿ: ಒಟ್ಟು 80 ಹೆಕ್ಟೇರ್ ಪ್ರದೇಶದಲ್ಲಿ ಬೂದುಗುಂಬಳ, ಕಲ್ಲಂಗಡಿ ಸೇರಿ ವಿವಿಧ ಬೆಳೆ ಬೆಳೆಯಲಾಗಿದ್ದು, ಸದ್ಯ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೂಡಲೇ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

5-6 ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮವಾಗಿ ತಾಲೂಕಿನಲ್ಲಿ ಬೆಳೆದ 20 ಎಕರೆ ಜಮೀನಿನಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ಸುಮಾರು 35 ಲಕ್ಷಕ್ಕೂ ಹೆಚ್ಚು ವೆಚ್ಚದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ಯಾದಗಿರಿ ಜಿಲ್ಲೆಯಲ್ಲಿ ಮಳೆ ಅಬ್ಬರ : ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶ, ಮನೆ ಗೋಡೆಗಳು ಕುಸಿತ

ತುಂಬಿದ ಕೆರೆ ಕಟ್ಟೆ: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಕೆರೆ ಮತ್ತು ಗಾಂಧಿನಗರ ಕೆರೆ ಎರಡನೇ ಬಾರಿಗೆ ಕೋಡಿ ಬಿದ್ದು ಹರಿಯುತ್ತಿವೆ. ಹೂವಿನಹೊಳೆ ತುಂಬಿ ಹರಿಯುತ್ತಿದೆ. ತಾಲೂಕಿನ ಇಕ್ಕನೂರಿನಲ್ಲಿ 135.2 ಮಿಲಿ ಮೀಟರ್ ಅತ್ಯಧಿಕ ಮಳೆಯಾಗಿದೆ. ಕಸವನಹಳ್ಳಿ, ರಂಗನಾಥಪುರ, ನಂದಿಹಳ್ಳಿ, ಸೂಗೂರು, ಕುಂದಲಗೂರ, ಐಮಂಗಲ, ಈಶ್ವರೆಗೆರೆ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಸಹ ಜೋರು ಮಳೆಯಾಗಿದೆ. ಹೂವಿನಹೊಳೆ ಬಳಿ ಇರುವ ಸುವರ್ಣಮುಖಿ ನದಿ ತುಂಬಿ ಹರಿಯುತ್ತಿದ್ದು, ಗ್ರಾಮದ ನೂರಾರು ಜನರು ಸಂತಸದಿಂದ ವೀಕ್ಷಿಸಿದರು.

ಹೊಲ ಗದ್ದೆಗಳಲ್ಲಿ ನೀರು:ನಿನ್ನೆ ತಡರಾತ್ರಿ ಅಬ್ಬರಿಸಿದ ಮಳೆಗೆ ಅಡಿಕೆ, ಬಾಳೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ಮತ್ತಿತರೆ ಬೆಳೆಗಳು ನೀರುಪಾಲಾಗಿವೆ.

2,070 ಕ್ಯೂಸೆಕ್ ಒಳಹರಿವು: ವಾಣಿ ವಿಲಾಸ ಜಲಾಶಯದಲ್ಲಿ 2,070 ಕ್ಯೂಸೆಕ್ ಒಳಹರಿವಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 124.25 ಅಡಿ ಇದೆ. ಸುಮಾರು 80 ವರ್ಷಗಳ ಬಳಿಕ ಕಳೆದ ವರ್ಷ 125.50 ಅಡಿ ಸಂಗ್ರವಾಗಿದ್ದು, ಇದೀಗ 124.25 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂ ಭರ್ತಿಗೆ 5.75 ಅಡಿ ಬಾಕಿ ಇದ್ದು, ಹೆಚ್ಚು ಮಳೆ ಬಂದರೆ ಈ ಬಾರಿ ವಾಣಿ ವಿಲಾಸ ಜಲಾಶಯ ತುಂಬುವ ಸಾಧ್ಯತೆಯಿದೆ.

Last Updated : Aug 6, 2022, 9:06 PM IST

ABOUT THE AUTHOR

...view details