ಚಿತ್ರದುರ್ಗ:ನಗರದ ಹೊರವಲಯದಲ್ಲಿರುವ ಐತಿಹಾಸಿಕ ತಿಮ್ಮಣ್ಣ ನಾಯಕ ಕೆರೆಯ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.
ಮುದ್ದಾದ ಮರಿಗಳೊಂದಿಗೆ ಚಿರತೆ ಚಿನ್ನಾಟ... ಕೆರೆ ಬಳಿ ಸುಳಿಯದಂತೆ ಅರಣ್ಯ ಇಲಾಖೆ ಸೂಚನೆ
ಕೋಟೆನಾಡಿನ ಹೊರವಲಯದಲ್ಲಿ ಚಿರತೆಯೊಂದು ತನ್ನೆರಡು ಮರಿಗಳೊಂದಿಗೆ ಆಟವಾಡುತ್ತಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ತನ್ನ ಮರಿಯೊಂದಿಗಿರುವ ಚಿರತೆ ಯಾರಿಗೂ ತೊಂದರೆ ನೀಡಿದೆ ಕೆರೆ ಬಳಿ ಬೀಡುಬಿಟ್ಟಿದೆ. ಸದ್ಯ ಚಿರತೆ ಇರುವ ಕಡೆ ಯಾರೂ ಹೋಗದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
2-3 ತಿಂಗಳ ಹಿಂದೆಯೇ ಮರಿಗಳಿಗೆ ಚಿರತೆ ಜನ್ಮ ನೀಡಿದ್ದು, ಮರಿಗಳು ತನ್ನ ತಾಯಿ ಚಿರತೆಯೊಂದಿಗೆ ಚಿನ್ನಾಟ ಆಡುವ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ. ತಿಂಗಳಿನಿಂದ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಬೀಡುಬಿಟ್ಟಿದ್ದು, ನಗರ ಪ್ರದೇಶಕ್ಕೆ ಲಗ್ಗೆ ಇಡದೆ ಜನರಿಗೆ ತೊಂದರೆ ನೀಡದೆ ಅಲ್ಲಿಯೇ ವಾಸಿಸುತ್ತಿದೆ.
ತಿಮ್ಮಣ್ಣ ನಾಯಕ ಕೆರೆಯ ಆಸುಪಾಸು ಜನಸಾಮಾನ್ಯರು ವಾಯುವಿಹಾರಕ್ಕೆ ತೆರಳಿದಾಗ ಈ ಚಿರತೆಗಳು ಕಂಡಿವೆ. ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರಿಂದ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಕೆರೆ ಭಾಗದಲ್ಲಿ ಯಾರೂ ಸಂಚರಿಸದಂತೆ ಸಿಬ್ಬಂದಿ ಮನವಿ ಮಾಡಿದ್ದಾರೆ.