ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ನಗರ ವ್ಯಾಪ್ತಿಯಿಂದ ಹಂದಿಗಳ ಸ್ಥಳಾಂತರಕ್ಕೆ ಸೂಚನೆ - ಕೋವಿಡ್-19

ನಗರದ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕಿರುವವರು, ಹಂದಿಗಳನ್ನು ಸುರಕ್ಷಿತವಾಗಿ ಗೂಡಿನಲ್ಲಿ ಕೂಡಿ ಹಾಕದೇ, ಎಲ್ಲೆಂದರಲ್ಲಿ ಬಿಟ್ಟಿರುವುದರಿಂದ ಹಂದಿಗಳು ನಗರದ ನೈರ್ಮಲ್ಯ ಹಾಳು ಮಾಡುತ್ತಿವೆ. ಹಂದಿಗಳನ್ನು ನಗರ ವ್ಯಾಪ್ತಿಯಿಂದ ಬೇರೆಡೆ ಸ್ಥಳಾಂತರಿಸುವಂತೆ ಈ ಹಿಂದೆ ಸೂಚನೆ ನೀಡಿದರೂ, ನಗರದಿಂದ ಹಂದಿಗಳನ್ನು ಸ್ಥಳಾಂತರಿಸಿಲ್ಲ ಎಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಹೇಳಿದ್ದಾರೆ.

chithradurga
chithradurga

By

Published : May 4, 2020, 11:40 AM IST

ಚಿತ್ರದುರ್ಗ:ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಿಂದ ಮೂರು ದಿನಗಳ ಒಳಗೆ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಅವರು ಹಂದಿ ಸಾಕಣೆದಾರರಿಗೆ ಸೂಚನೆ ನೀಡಿದ್ದಾರೆ.

ಕೋವಿಡ್-19 ದೇಶದೆಲ್ಲೆಡೆ ಹರಡುತ್ತಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಪ್ರಕಾರ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ನಗರ ವ್ಯಾಪ್ತಿಯಲ್ಲಿ ಕೈಗೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಎಲ್ಲೆಡೆ ಸೋಂಕು ನಿವಾರಕಗಳನ್ನು ಸಿಂಪಡಿಸಲಾಗುತ್ತಿದೆ ಎಂದರು.

ಇದರ ಜೊತೆಗೆ ನಗರದ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕಿರುವವರು, ಹಂದಿಗಳನ್ನು ಸುರಕ್ಷಿತವಾಗಿ ಗೂಡಿನಲ್ಲಿ ಕೂಡಿ ಹಾಕದೇ, ನಗರದಲ್ಲಿ ಎಲ್ಲೆಂದರಲ್ಲಿ ಬಿಟ್ಟಿರುವುದರಿಂದ ಹಂದಿಗಳು ನಗರದ ನೈರ್ಮಲ್ಯ ಹಾಳು ಮಾಡುತ್ತಿರುವುದು ಹಾಗೂ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿರುವುದು ಕಂಡುಬಂದಿದೆ. ಈ ಕುರಿತಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ನಗರಸಭೆಯಲ್ಲಿ ಸ್ವೀಕೃತವಾಗುತ್ತಿವೆ. ಹಂದಿಗಳನ್ನು ನಗರ ವ್ಯಾಪ್ತಿಯಿಂದ ಬೇರೆಡೆ ಸ್ಥಳಾಂತರಿಸುವಂತೆ ಈ ಹಿಂದೆ ಹಲವು ಬಾರಿ ಹಂದಿ ಮಾಲೀಕರ ಸಭೆ ಕರೆದು, ಸೂಚನೆ ನೀಡಿದರೂ, ನಗರದಿಂದ ಹಂದಿಗಳನ್ನು ಸ್ಥಳಾಂತರಿಸಿಲ್ಲ ಎಂದು ಹೇಳಿದರು.

ಕರ್ನಾಟಕ ಪುರಸಭೆಗಳ ಕಾಯ್ದೆ 1964ರಂತೆ ನಗರಸಭೆ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕುವುದು ಹಾಗೂ ನಗರದಲ್ಲಿ ಬಿಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹೀಗಾಗಿ ಹಂದಿ ಮಾಲೀಕರು ತಾವು ಸಾಕಿರುವ ಹಂದಿಗಳನ್ನು ಮೂರು ದಿನಗಳ ಒಳಗಾಗಿ ನಗರ ವ್ಯಾಪ್ತಿಯಿಂದ ಬೇರೆಡೆ ಸ್ಥಳಾಂತರಿಸಬೇಕು. ತಪ್ಪಿದಲ್ಲಿ, ನಗರಸಭೆಯಿಂದಲೇ ನಿಯಮಾನುಸಾರ ಹಂದಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details