ಚಿತ್ರದುರ್ಗ: ಬಿಜೆಪಿ ಪಕ್ಷವನ್ನು ತೊರೆದಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಚಿತ್ರದುರ್ಗ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಇಂದು (ಬುಧವಾರ) ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಅಲ್ಲದೇ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿ ಫಾರಂ ಸಹ ಪಡೆದುಕೊಂಡಿದ್ದಾರೆ.
ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಲು ಹುಬ್ಬಳ್ಳಿಗೆ ತೆರಳುತ್ತಿದ್ದ ಅವರು ಚಿತ್ರದುರ್ಗ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಭಾವುಟ ಕೊಡುವ ಮೂಲಕ ಹೆಚ್ ಡಿ ಕುಮಾರಸ್ವಾಮಿ ಅವರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಜೆಡಿಎಸ್ ಬಿ ಫಾರಂ ಪಡೆದ ಬಳಿಕ ಆಯನೂರು ಮಂಜುನಾಥ್ ಕೈ ಮುಗಿದಿದ್ದಾರೆ. ಈ ವೇಳೆ, ಕುಮಾರಸ್ವಾಮಿಗೆ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಕೂಡಾ ಸಾಥ್ ನೀಡಿದ್ದಾರೆ.
ಗುರುವಾರ ನಾಮಪತ್ರ ಸಲ್ಲಿಸಲಿರುವ ಆಯನೂರು ಮಂಜುನಾಥ್: ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಯನೂರು ಮಂಜುನಾಥ್, ಶಿವಮೊಗ್ಗದ ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಫೆಬ್ರವರಿಯಲ್ಲಿ ತೀರ್ಮಾನಿಸಿದ್ದೆ. ಬಿಜೆಪಿ ಟಿಕೆಟ್ ಕೈತಪ್ಪುವುದು ಖಚಿತವಾದ ಬಳಿಕ ಪಕ್ಷ ತೊರೆಯುವ ನಿರ್ಧಾರ ಮಾಡಿದೆ. ಸಿಎಂ ಇಬ್ರಾಹಿಂ ಹಾಗೂ ಹೆಚ್ಡಿ ಕುಮಾರಸ್ವಾಮಿ ಅವರು ಜೆಡಿಎಸ್‌ಗೆ ಆಹ್ವಾನಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದ ಅವರು, ಗುರುವಾರ ನಾಮಪತ್ರ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ.
ಮಂಜುನಾಥ್ ಜೊತೆ ಮಾತುಕತೆ ನಡೆಸಿದ್ದ ಹೆಚ್ಡಿಕೆ: ಈ ಬಗ್ಗೆ ಮಾಹಿತಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಜೊತೆ ಮಾತುಕತೆ ಆಗಿದೆ. ಇಂದು ಅವರು ಜೆಡಿಎಸ್ನಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಲಿದ್ದಾರೆ. ಇನ್ನೊಬ್ಬ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದರು.
ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿ ನಡೆಸಿದ ಮಂಜುನಾಥ್:ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಆಯನೂರು ಮಂಜುನಾಥ್, ‘‘ನಾನು ನನ್ನ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದರು. ನಾನು ಇಂದು ಸಭಾಪತಿಗಳ ಬಳಿ ತೆರಳಿ ನಾನು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಭಾಪತಿಗಳು ನನಗೆ ಸಮಯ ನೀಡಿದ್ದಾರೆ. ಇಂದು ಹುಬ್ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಜತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ಮೇಲ್ಮನೆಕ್ಕಿಂತ ಕೆಳಮನೆ ಪರಿಣಾಮಕಾರಿಯಾಗಿದೆ. ಇದರಿಂದ ವಿಧಾನಸಭೆ ಪ್ರವೇಶ ಮಾಡಲು ಬಯಸಿದ್ದೇನೆ. ಎಲ್ಲಾರ ಆಶೋತ್ತರಗಳ ಈಡೇರಿಕೆಗಾಗಿ ವಿಧಾನಸಭೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಮೇಲೆ ಭರವಸೆಯನ್ನಿಟ್ಟು ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ‘‘ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.
ಶಿವಮೊಗ್ಗ ಶಾಂತವಾಗಿರಬೇಕು, ಅತ್ಯಂತ ಸುಂಸ್ಕೃತ ಸಜ್ಜನಿಕೆಗೆ ಹೆಸರಾಗಿದ್ದ ಶಿವಮೊಗ್ಗ ತನ್ನ ಪರಂಪರೆ ಕಳೆದುಕೊಳ್ಳುತ್ತಿರುವ ಆಂತಕ ದೂರ ಮಾಡಬೇಕಿದೆ ಎಂದು ಅವರು ಬೆಳಗ್ಗೆ ಪ್ರತಿಪಾದಿಸಿದ್ದರು. ನನ್ನ ಘೋಷಣೆಯ ನಂತರ ಕೆಲವರ ನಾಲಿಗೆ ಬಂದ್ ಆಗಿದೆ ಎಂದು ಟೀಕಾಪ್ರಹಾರ ನಡೆಸಿದ್ದರು.
ಇದನ್ನೂ ಓದಿ:ಆಯನೂರು ಮಂಜುನಾಥ್ ಜೆಡಿಎಸ್ನಿಂದಲೇ ಸ್ಪರ್ಧೆ, 70 ಅಭ್ಯರ್ಥಿಗಳ ಪಟ್ಟಿ ಇಂದೇ ರಿಲೀಸ್: ಕುಮಾರಸ್ವಾಮಿ