ಚಿತ್ರದುರ್ಗ:ಪತಿಯೋರ್ವ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣ ಬಳಿ ಬುಧವಾರ ನಡೆದಿದೆ. ಶಿವಕುಮಾರ್ ಎಂಬಾತ ಹಲ್ಲೆ ಮಾಡಿದ ಪತಿ. ಆಶಾ (26) ಹಲ್ಲೆಗೊಳಗಾಗಿರುವ ಪತ್ನಿ. ಶಿವಕುಮಾರ ಎಳೆನೀರು ಕೊಚ್ಚುವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಪತ್ನಿ ಆಶಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಳಿಕ ಆರೋಪಿ ಶಿವಕುಮಾರನನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಯು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತೀರ್ಪಿನ ನಿಮಿತ್ತ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದರು. ಚಳ್ಳಕೆರೆ ಸಾರಿಗೆ ಬಸ್ ನಿಲ್ದಾಣ ಬಳಿ ಬರುತ್ತಿದ್ದಂತೆ ಪತ್ನಿಯನ್ನು ತಡೆದ ಶಿವಕುಮಾರ್, ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.