ಚಿತ್ರದುರ್ಗ: ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದಾರೆ. ಸರ್ಕಾರ ಕೂಡ ಗ್ರಾಮಗಳ ಅಭಿವೃದ್ಧಿ ಗ್ರಾಮ ಪಂಚಾಯತ್‌ಗಳ ಮೂಲಕ ಆಗಲಿ ಎಂದು ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಇಲ್ಲೊಂದು ಗ್ರಾಮ ಪಂಚಾಯತ್ ಅಧಿಕಾರಿಗಳು ಸರ್ಕಾರದ ದುಡ್ಡನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಪಂ ಅಧಿಕಾರಿಗಳ ವಿರುದ್ಧ ಮನ್ನೇಕೋಟೆ ಗ್ರಾಮಸ್ಥರು ಆಕ್ರೋಶ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮ ಪಂಚಾಯತ್ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಯಲ್ಲಿ ಆಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಂದೇ ಕಾಮಗಾರಿಗೆ ಮೂರು ಬಾರಿ ಬಿಲ್ ಪಡೆದುಕೊಂಡು ಕಾಮಗಾರಿ ನಡೆಸದೇ ಹಣ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿಲಾಗಿದೆ.
ಮನ್ನೇಕೋಟೆ ಗ್ರಾಮ ಪಂಚಾಯತ್ ಅಂದಿನ ಪಿಡಿಒ ಉಮಾಕಾಂತ, ಕಂಪ್ಯೂಟರ್ ಆಪರೇಟರ್ ಆರ್. ಮಂಜುನಾಥ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರ ವಿರೂಪಾಕ್ಷಿ ಎಂಬ ಮೂವರು ಅಧಿಕಾರಿಗಳು ಪಂಚಾಯತ್‌ಗೆ ಬಂದ 2020-21ನೇ ಸಾಲಿನ ನರೇಗಾ ಯೋಜನೆ ಹಣ ಲಪಟಾಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ಮನ್ನೇಕೋಟೆ ಗ್ರಾಮಸ್ಥರಿಗೆ 100 ಮಾನವ ದಿನಗಳ ಉದ್ಯೋಗ ಕೂಡ ಒದಗಿಸಲಾಗಿದೆ. ಯಂತ್ರಗಳ ಮೂಲಕ ಅಲ್ಪಸ್ವಲ್ಪ ಕೆಲಸ ಮಾಡಿ, ಹೊಸ ಬೋರ್ಡ್ ಅಳವಡಿಸಿ ಜನರ ಅಕೌಂಟ್‌ಗಳಿಂದ ಹಣ ಪಡೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜಕಲ್ಯಾಣ ಸಚಿವರ ತವರಲ್ಲಿ ಭಷ್ಟ್ರಾಚಾರದ ಆರೋಪ :ಮೂಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮನ್ನೇಕೋಟೆ ಗ್ರಾಮ ಬರುತ್ತದೆ. ಹಾಲಿ ಜಿಲ್ಲಾ ಉಸ್ತುವಾರಿಯಾಗಿರುವ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಅವರ ತವರು ಕ್ಷೇತ್ರದ ಈ ಗ್ರಾಮದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದು, ಸಚಿವರು ಮಾತ್ರ ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಮನ್ನೇಕೋಟೆ ಗ್ರಾಮದ ಜನರು ಆರೋಪಿಸಿದ್ದಾರೆ.
ಹಳೆ ಕಾಮಗಾರಿಗೆ ಹೊಸ ನಾಮಫಲಕ: ಕಾಲುವೆ ನಿರ್ಮಾಣ, ಹೂಳು ತಗೆಯುವುದು, ಗೋ ಕಟ್ಟೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ 19 ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಮನ್ನೇಕೋಟೆ ಗ್ರಾಮದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ, ಹಳೆ ಕಾಮಗಾರಿಗಳ ಸ್ಥಳದಲ್ಲಿ ಹೊಸ ನಾಮಫಲಕ ಹಾಕಿ, ಅಂದಾಜು 40 ಲಕ್ಷ ಹಣ ಕೊಳ್ಳೆ ಹೊಡಿದ್ದಾದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ಭಷ್ಟ್ರಚಾರ ಕುರಿತು ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದಂತೆ ನಿಗದಿತ ಸ್ಥಳ ಬಿಟ್ಟು ಬೇರೆಡೆ ಕಾಲುವೆ ಕಾಮಗಾರಿ ಮಾಡಿದ್ದಾರೆ. ಆದ್ರೆ ಜೆಸಿಬಿಯಿಂದ ಪೈಪ್ ಲೈನ್ ನಿರ್ಮಾಣ ಮಾಡುವ ಹಾಗೆ ಕಾಲುವೆ ಕೊರೆಯಿಸಿ, ಖರ್ಚಿನ ಬಗ್ಗೆ ನಾಮಫಲಕ ಅಳವಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಒಂದೇ ಗೋ ಕಟ್ಟೆಗೆ ಮೂರು ಬಿಲ್: ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗಲೆಂದು ಗೋಕಟ್ಟೆ ನಿರ್ಮಾಣ ಮಾಡಲಾಗುತ್ತದೆ. ಆದ್ರೆ ಈ ಗ್ರಾಮದಲ್ಲಿ ಗೋಕಟ್ಟೆ ನಿರ್ಮಾಣ ಮಾಡದೇ ಕಾಮಗಾರಿ ಸ್ಥಳ ಬದಲಾವಣೆ ಮಾಡಿ, 9 ಲಕ್ಷ ಹಣ ಕಬಳಿಕೆ ಮಾಡಿದ್ದಾರೆ. ಕೃಷಿ ಜಮೀನಿಗೆ ನೀರು ಒದಗಿಸಲು ಕಾಲುವೆ ನಿರ್ಮಾಣ ಮಾಡಲಾಗಿದೆ. ಕೃಷಿ ಇಲಾಖೆ ನಿರ್ಮಿಸಿದ ಕೃಷಿ ಹೊಂಡಕ್ಕೆ ಕಾಮಗಾರಿ ಪೂರ್ಣಗೊಂಡ ಬಗ್ಗೆ ದಾಖಲೆ ಸೃಷ್ಟಿ ಮಾಡಿ ಅನುದಾನ ಪಡೆದಿದ್ದಾರೆ ಎಂದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮಸ್ಥರಿಗೆ ಅಧಿಕಾರಿಯಿಂದ ಲಿಖಿತ ಪತ್ರ: ಗ್ರಾಮಸ್ಥರು ಒತ್ತಾಯಕ್ಕೆ ಮಣಿದ ಇಂಜಿನಿಯರ್ ಕಾಮಗಾರಿ ಸ್ಥಳ ಪರಿಶೀಲನೆ ವೇಳೆ 13 ಕಾಮಗಾರಿಗಳು ಲೋಪದಿಂದ ಕೂಡಿವೆ. ಕಾಮಗಾರಿ ಕಳಪೆಯಾಗಲು ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಆರ್. ಮಂಜುನಾಥ ಕಾರಣ, ಅವನಿಗೆ ಜಿಪಿಎಸ್ ಮಾಡಲು ಅವಕಾಶ ಮಾಡಿಕೊಟ್ಟಿದರಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು, ಆಕ್ರಮ ವೆಸಗಿದ್ದು, ಪಿಡಿಒಗೆ ಮಾಹಿತಿ ನೀಡದೆ ಹೀಗೆ ಮಾಡಿದ್ದಾನೆ. ಇನ್ನು ಮುಂದೆ ಎನ್‌ಎಂಆರ್ ಲಾಗಿನ್ ಹಿಂಪಡೆಲಾಗುವುದು ಎಂದು ಕೈ ಬರಹ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಮನ್ನೇಕೋಟೆ ಗ್ರಾಮ ಪಂಚಾಯತಿಯಲ್ಲಿ ಅಂದಾಜು 40 ಲಕ್ಷ ಅನುದಾನವನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ. ಸೂಕ್ತ ತನಿಕೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತರಿಗೆ ಜಿಲ್ಲಾ ಪಂಚಾಯಿತ ಸಿಇಒ , ತಾ.ಪಂ ಇಒ, ಎಸಿಬಿ, ಜಿಲ್ಲಾಧಿಕಾರಿ ಹಾಗೂ ಪಿಎಂ ಕಚೇರಿಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ. ಆದ್ರೆ ಅಧಿಕಾರಿಗಳು ತನಿಕೆ ನಡೆಸಲು ಮುಂದಾಗದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.