ಚಿತ್ರದುರ್ಗ: ಸ್ವಾಮಿ ನನ್ನ ಗಂಡನಿಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ಮಾಡಿಸಬೇಕು. ನಾನು ಮುತ್ತೈದೆಯಾಗಿ ಬದುಕಬೇಕು. ನನ್ನ ಗಂಡನನ್ನು ಬದುಕಿಸಿಕೊಡಿ ಇಲ್ಲವೇ ಇಬ್ಬರಿಗೂ ಸಾವು ಕೊಡಿ ಎಂದು ಮಹಿಳೆಯೊಬ್ಬರು ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದಳು.
ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ ಮಹಿಳೆ.. ಮುಂದೇನಾಯ್ತು!? - ಆಸ್ಪತ್ರೆ
ಮಹಿಳೆಯೊಬ್ಬರು ಸಚಿವ ಶ್ರೀರಾಮುಲು ಮುಂದೆ ದಯಾಮರಣ ಕೋರಿದ್ದು, ಆಕೆಯ ಕಣ್ಣೀರಿಗೆ ಮರುಗಿದ ರಾಮುಲು ಆಕೆಗೆ ಸ್ಥಳದಲ್ಲಿಯೇ ಸಹಾಯ ನೀಡಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ನಿವಾಸಿಯಾದ ಪಾರ್ವತಮ್ಮ ಎಂಬುವರು ಏಕಾಏಕಿ ಸಚಿವರ ಮುಂದೆ ದಯಾಮರಣ ಕೋರುತ್ತ ಸಚಿವರೊಂದಿಗೆ ಮಾತಿಗಿಳಿದರು. ಶಿವಮೊಗ್ಗ, ಮಂಗಳೂರು ಸೇರಿದಂತೆ ಎಲ್ಲಾ ಆಸ್ಪತ್ರೆ ಸುತ್ತಿಸುತ್ತಿ ಸಾಲ ಮಾಡಿಕೊಂಡಿದ್ದೇನೆ. ಗಂಡನಿಗೆ ಡಯಾಲಿಸಿಸ್ಗೆ ಹಾಗೂ ರಕ್ತ ಪರೀಕ್ಷೆಗಾಗಿ ಪದೇಪದೆ ಚಿತ್ರದುರ್ಗ ನಗರಕ್ಕೆ ಹೋಗಬೇಕಾಗಿದೆ. ಚಿತ್ರದುರ್ಗಕ್ಕೆ ಒಮ್ಮೆ ಹೋಗಿ ಬರಬೇಕು ಅಂದ್ರೇ 300 ರೂಪಾಯಿ ಬೇಕು ಸ್ವಾಮಿ. ಕೈಯಲ್ಲಿ 50 ರೂ. ಇರೋದಿಲ್ಲ ಹೇಗೆ ಅಷ್ಟು ದೂರ ಹೋಗಿ ಬರಬೇಕು ಅಂತಾ ಕಣ್ಣೀರು ಹಾಕಿ, ಸ್ವಾಮಿ ನಮಗೆ ಇಲ್ಲೇ ಚಿಕಿತ್ಸೆ ಕೊಡ್ಸಿ ಇಲ್ಲವೇ ಇಬ್ಬರಿಗೂ ಸಾವು ಕೊಡಿ ಅಂತಾ ಕಣ್ಣೀರು ಹಾಕಿದಳು.
ಇನ್ನೂ ಮಹಿಳೆಯ ಕಣ್ಣೀರಿಗೆ ತಕ್ಷಣವೇ ಮರುಗಿ ಸ್ಪಂದಿಸಿದ ಶ್ರೀರಾಮುಲು, ವೇದಿಕೆ ಮೇಲೆ ಮಹಿಳೆಗೆ ಅಭಯ ಹಸ್ತ ನೀಡಿ, ಅಶಕ್ತ ಡಯಾಲಿಸಿಸ್ ರೋಗಿಗಳನ್ನ ಸರ್ಕಾರಿ ವೆಚ್ಚದಲ್ಲೇ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲು ಸೂಚಿಸುವ ಮೂಲಕ ಆರೋಗ್ಯ ಸುರಕ್ಷಾ ಸಮಿತಿ ಅದಕ್ಕೆ ಹಣ ವ್ಯಯಿಸಲಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಹೇಳಿದರು.