ಚಿತ್ರದುರ್ಗ:ತಾಲೂಕಿನ ದಂಡಿನ ಕುರುಬರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬರು ತನ್ನೂರಿನ ಸರ್ಕಾರಿ ಶಾಲೆಗೆ ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ಮಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು.. ಕುರುಬರಹಟ್ಟಿ ಗ್ರಾಮದ ಸರ್ಕಾರಿ ಶಾಲೆ, ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಶಿಥಿಲಾವಸ್ಥೆಗೆ ತಲುಪಿತ್ತು. ಶಾಲಾ ಕೊಠಡಿಗಳನ್ನು ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಅಂದ ಹಾಗೆ ಈ ಶಾಲೆಯಲ್ಲಿ ಒಟ್ಟು 6 ಕೊಠಡಿಗಳಿವೆ. 1 ರಿಂದ 8ನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿಥಿಲಾವಸ್ಥೆಗೆ ತಲುಪಿದ ಕೊಠಡಿಗಳಲ್ಲೇ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಇದನ್ನು ಕಂಡ ದಂಡಿನ ಕುರುಬರಹಟ್ಟಿ ಗ್ರಾಮದ ಸನ್ನಕ್ಕಿ ಪ್ರಹ್ಲಾದ್, ತಾನು ಕೂಡಿಟ್ಟ ಹಣದಲ್ಲಿ ಅತಿದೊಡ್ಡ ಕೊಠಡಿಯೊಂದನ್ನು ನಿರ್ಮಿಸಿ, ಗ್ರಾಮದ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಜೊತೆಗೆ ಈ ಕೊಠಡಿ ಉದ್ಘಾಟನೆಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಮಾಡಿಸಿ, ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.