ಚಿತ್ರದುರ್ಗದ ಖಾಸಗಿ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ಈ ಬಾಲಕಿ, ದಂಡಿನಕುರುಬರಹಟ್ಟಿ ಗ್ರಾಮದ ಸುಮಾ-ಧನಂಜಯರೆಡ್ಡಿ ದಂಪತಿಗಳ ಒಬ್ಬಳೇ ಪುತ್ರಿ. ಈಕೆ ಕೇವಲ ಶಾಲೆ, ಆಟ, ಪಾಠ ಅಂತಾ ಕುಳಿತುಕೊಳ್ಳದೇ, ವಿಶೇಷ ಗಾಂಧಾರಿ ವಿದ್ಯೆ ಕಲಿಯಲು ಆಸಕ್ತಿ ಹೊಂದಿದ್ದಳು. ಅಂತೆಯೇ ದಾವಣಗೆರೆಯ ಶಶಿಧರ್ ಎಂಬ ಗುರುಗಳ ಬಳಿ ತೆರಳಿ ಕೆಲವೇ ದಿನಗಳಲ್ಲಿ ಈ ಕಲೆಯನ್ನ ಅರೆದು ಕುಡಿದಿದ್ದಾಳೆ.
ಚಿಕ್ಕ ವಯಸ್ಸಲ್ಲೇ ಅಪರೂಪದ ವಿದ್ಯೆ ಅರಗಿಸಿಕೊಂಡ ಸಂಜನಾ...
ಈ ವಿದ್ಯೆಯ ಮೂಲಕ ಎಷ್ಟೋ ವರ್ಷಗಳ ಅನುಭವಿಯಂತೆ ವಾಸನೆ ಮತ್ತು ಗ್ರಹಿಕೆಯಿಂದಲೇ ಬಾಲಕಿ ಪುಸ್ತಕಗಳನ್ನು ಓದೋದು, ಚಿತ್ರ ಬಿಡಿಸೋದು, ನೋಟುಗಳ ಕ್ರಮಸಂಖ್ಯೆ ಹೇಳೋದು ಮತ್ತು ಎದುರಿಗೆ ನಿಂತ ವ್ಯಕ್ತಿ ಯಾರೆಂದು ಗುರುತಿಸುತ್ತಾಳೆ. ಜೊತೆಗೆ ವಸ್ತುಗಳ ಬಣ್ಣ, ವ್ಯಕ್ತಿಗಳು ಧರಿಸಿರೋ ಬಟ್ಟೆಗಳ ಬಣ್ಣಗಳನ್ನ ಕೇವಲ ವಾಸನೆಯಿಂದಲೇ ಹೇಳುತ್ತಾಳೆ. ಈ ಅಪರೂಪದ ವಿದ್ಯೆ ಕಲಿತಿರೋ ಸಂಜನಾ ಕೋಟೆನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ವಿದ್ಯೆಯಿಂದ ಆಕೆಯ ಜ್ಞಾನಾರ್ಜನೆ ಕೂಡ ಹೆಚ್ಚಾಗಿದೆಯಂತೆ.
ಆರಂಭದಲ್ಲಿ ಬಾಲಕಿ ಬಗ್ಗೆ ಶಿಕ್ಷಕರಿಗೆ ಅನುಮಾನ ಬಂದಿತ್ತಂತೆ. ಆದ್ರೆ ಬಳಿಕ ಕಪ್ಪು ಪಟ್ಟಿಯನ್ನ ಶಿಕ್ಷಕರೇ ಸ್ವತಃ ಕಣ್ಣಿಗೆ ಕಟ್ಟಿ ಪರೀಕ್ಷೆ ಮಾಡಿದಾಗ ಬಾಲಕಿಯ ಪಾಂಡಿತ್ಯವನ್ನ ಮೆಚ್ಚಿಕೊಂಡು, ಶ್ಲಾಘಿಸಿದ್ದಾರೆ. ನಮ್ಮ ಶಾಲೆಯಲ್ಲಿ ಈ ವಿದ್ಯಾರ್ಥಿನಿ ಓದುತ್ತಿರೋದು ನಮಗೆ ಹೆಮ್ಮೆಯ ಸಂಗತಿ, ಇಂತಹ ವಿಸ್ಮಯ ಪ್ರದರ್ಶನಗಳನ್ನ ನೋಡಿ ನಮಗೂ ಅಚ್ಚರಿ ಮೂಡಿದೆ ಅಂತಾರೆ ಶಾಲೆಯ ಶಿಕ್ಷಕ. ಇನ್ನು ಮಗಳ ಸಾಧನೆ ಕಂಡು ಬಾಲಕಿಯ ತಂದೆ-ತಾಯಿ ಕೂಡ ಸಂತಸಗೊಂಡಿದ್ದಾರೆ.
ವಿಶೇಷ ಕಲೆಯ ಮೂಲಕ ಗಮನಸೆಳೆದ ಸಂಜನಾ, ಸದ್ಯ ಶಾಲೆಗಳಲ್ಲಿ ಪ್ರದರ್ಶನ ನೀಡ್ತಿದ್ದಾರೆ. ಈ ಮೂಲಕ ತನ್ನ ವಿದ್ಯೆಯನ್ನು ಹೊರಹಾಕುತ್ತಿದ್ದಾಳೆ. ಈ ಗಾಂಧಾರಿ ಬಾಲಕಿಯನ್ನು ಸರ್ಕಾರ ಗುರುತಿಸಿ ಸೂಕ್ತ ಸಹಕಾರ ಮತ್ತು ಅಗತ್ಯ ನೆರವು ನೀಡಿದರೆ ಈಕೆ ಇನ್ನಷ್ಟು ಸಾಧನೆ ಮಾಡಬಲ್ಲಳು ಅನ್ನೋದು ನಮ್ಮ ಆಶಯ.